ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ಒಬ್ಬ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತನ ವಿಚಾರಣೆ ನಡೆಸಿದ ವೇಳೆ, ಮನೆಗಳ್ಳತನಕ್ಕೆ ಸಂಬಂಧಿಸಿದ 4 ಪ್ರಕರಣಗಳು ಪತ್ತೆಯಾಗಿವೆ.
ಆರೋಪಿತನಿಂದ 136 ಗ್ರಾಂ ಬಂಗಾರದ ಆಭರಣಗಳು, ಅಂದಾಜು ₹20 ಲಕ್ಷ 35 ಸಾವಿರ ಮೌಲ್ಯ, ಹಾಗೂ 1 ಕೆ.ಜಿ. ಬೆಳ್ಳಿಯ ಆಭರಣಗಳು, ಅಂದಾಜು ₹2 ಲಕ್ಷ 30 ಸಾವಿರ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು ₹22 ಲಕ್ಷ 65 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಮೂಲಕ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 4 ಮನೆಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿವಿಧ ಘನ ನ್ಯಾಯಾಲಯಗಳಲ್ಲಿ ಪ್ರಕರಣಗಳ ಪರವಾಗಿ ಪರಿಣಾಮಕಾರಿಯಾಗಿ ವಾದ ಮಂಡಿಸಿ, ಆರೋಪಿತರಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ಕಾರಿ ಅಭಿಯೋಜಕರಿಗೆ ಸನ್ಮಾನಿಸಲಾಯಿತು.
ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದು, ಕಾನೂನುಬದ್ಧವಾಗಿ ವಾದ ಮಂಡಿಸಿ, ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ PP, APP ಹಾಗೂ ADP ಅಧಿಕಾರಿಗಳನ್ನು ಗೌರವಿಸಲಾಯಿತು.
ಪೊಲೀಸ್ ತನಿಖೆಯ ಬಳಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಮರ್ಥವಾಗಿ ಮಂಡಿಸಿ, ಅಪರಾಧಿಗಳಿಗೆ ಶಿಕ್ಷೆ ದೊರಕಿಸುವಲ್ಲಿ ಸರ್ಕಾರಿ ಅಭಿಯೋಜಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ.
ಈ ಹಿನ್ನೆಲೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿ, ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ದೊರಕಿಸಲು ಶ್ರಮಿಸಿದ ಸರ್ಕಾರಿ ಅಭಿಯೋಜಕರನ್ನು ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೀದರ ನಗರದ ಎಸ್‌ಬಿಐ ಬ್ಯಾಂಕ್ ಎದುರು ಎಸ್‌ಎಂಎಸ್ ಕಂಪನಿಯ ಎಟಿಎಂ ವ್ಯಾನ್ ಸಿಬ್ಬಂದಿಯ ಮೇಲೆ ಶೂಟೌಟ್ ನಡೆಸಿ, ಕೊಲೆ ಮಾಡಿ ಬರೋಬ್ಬರಿ 83 ಲಕ್ಷ ರೂಪಾಯಿ ಹಣವನ್ನು ದೋಚಿದ್ದ ಪ್ರಕರಣದ ಆರೋಪಿಗಳಿಗಾಗಿ ಬೀದರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಇದೀಗ ಸಿನಿಮೀಯ ತಿರುವು ಪಡೆದುಕೊಂಡಿದೆ.
ಪ್ರಕರಣ ದಾಖಲಾದ ಬಳಿಕ ಆರೋಪಿಗಳ ಬೆನ್ನತ್ತಿದ್ದ ಪೊಲೀಸರಿಗೆ, ಆರೋಪಿಗಳು ರಾಜ್ಯ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಪತ್ತೆಯಾಗಿತ್ತು.
ಆರೋಪಿಗಳ ಪತ್ತೆಗಾಗಿ ಬೀದರ ಪೊಲೀಸರು ಸತತ 19 ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 2 ಲಕ್ಷ 46 ಸಾವಿರದ 140 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿ ಆರೋಪಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.
ಆರೋಪಿಗಳು ಆಗಾಗ ತಮ್ಮ ಸ್ಥಳ ಬದಲಾಯಿಸುತ್ತಾ, ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಆದರೆ ಬೀದರ ಜಿಲ್ಲಾ ಪೊಲೀಸರ ನಿರಂತರ ಬೆನ್ನಟ್ಟುವಿಕೆ ಮತ್ತು ನಿಖರ ಮಾಹಿತಿಯ ಆಧಾರದ ಮೇಲೆ ಕೊನೆಗೂ ಆರೋಪಿಗಳ ಸುಳಿವು ಪತ್ತೆಯಾಗಿದೆ.
ಅಂತರರಾಜ್ಯ ಮಟ್ಟದಲ್ಲಿ ಕುಖ್ಯಾತರಾಗಿದ್ದ ಆರೋಪಿತರ ಕೋಟೆಗೆ ನುಗ್ಗಿದ ಬೀದರ ಜಿಲ್ಲಾ ಪೊಲೀಸರು, ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೂಟೌಟ್ ನಡೆಸಿ ಎಟಿಎಂ ವ್ಯಾನ್‌ನಿಂದ ₹83 ಲಕ್ಷ ಹಣ ಲೂಟಿ ಮಾಡಿದ್ದ ಆರೋಪಿಗಳ ಬಂಧನದೊಂದಿಗೆ, ಬೀದರ ಪೊಲೀಸರ ಸತತ 19 ತಿಂಗಳ ಕಾರ್ಯಾಚರಣೆಗೆ ಮಹತ್ವದ ಯಶಸ್ಸು ಸಿಕ್ಕಿದೆ.
ಅಪರಾಧ ಎಷ್ಟೇ ದೊಡ್ಡದಾಗಿರಲಿ.. ಆರೋಪಿಗಳು ಎಷ್ಟೇ ದೂರ ಓಡಿರಲಿ.. ಬೀದರ ಪೊಲೀಸರ ತನಿಖೆಯ ಬಲೆಗೆ ಕೊನೆಗೂ ಸಿಲುಕಲೇಬೇಕು ಎಂಬುದನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಪ್ರಾದೇಶಿಕ ಭದ್ರತಾ ಅಧಿಕಾರಿ ರಿಕೆಟ್ಸ್ ಟಾಡ್ ಅವರನ್ನು ಬೆಂಗಳೂರು ನಗರ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.ಈ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ ರಿಕೆಟ್ಸ್ ಟಾಡ್, ಪರಸ್ಪರ ಭದ್ರತಾ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಭದ್ರತಾ ಕ್ಷೇತ್ರದಲ್ಲಿ ಸಮನ್ವಯ ಹಾಗೂ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.ಬೆಂಗಳೂರು ನಗರ ಪೊಲೀಸ್ ಹಾಗೂ ಪ್ರಾದೇಶಿಕ ಭದ್ರತಾ ವ್ಯವಸ್ಥೆಗಳ ನಡುವೆ ಉತ್ತಮ ಸಹಕಾರ ಮತ್ತು ಸಮನ್ವಯಕ್ಕೆ ಈ ಭೇಟಿ ಮತ್ತಷ್ಟು ಬಲ ನೀಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಜೈಲು ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಡಿಐಜಿ ಜಿನೇಂದ್ರ ಕಣಗಾವಿ, ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ಬಳಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಡಿಐಜಿ ಜಿನೇಂದ್ರ ಕಣಗಾವಿ, ಜೈಲು ಎಸ್‌ಪಿ ಅನ್ಷುಕುಮಾರ್ ಅವರಿಂದ ಸ್ಟೇಟ್‌ಮೆಂಟ್ ಪಡೆದಿದ್ದಾರೆ.
ಬ್ಯಾರಕ್ ವಿಸಿಟ್ ವೇಳೆ ಯಾವುದೇ ಅಕ್ರಮಗಳು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಎಸ್‌ಪಿ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್‌ಗೆ ಮೊಬೈಲ್ ಯಾರು ನೀಡಿದರು ಎಂಬುದು ತಮಗೆ ಗೊತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಜ್ವಲ್ ಜೈಲು ಯೂನಿಫಾರ್ಮ್ ಧರಿಸದ ವಿಚಾರವಾಗಿ ಎಎಸ್‌ಪಿಗೆ ನಿಗಾ ವಹಿಸುವಂತೆ ಸೂಚಿಸಿದ್ದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಜೈಲು ನಿಯಮಾವಳಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಈ ವಿಚಾರದಲ್ಲಿ ಯಾರಿಗೂ ಯಾವುದೇ ವಿನಾಯಿತಿ ನೀಡದಂತೆ ಸೂಚಿಸಿದ್ದೆ ಎಂದೂ ಹೇಳಿಕೆ ನೀಡಿದ್ದಾರೆ.
ಜೈಲು ಎಸ್‌ಪಿಯ ಸಂಪೂರ್ಣ ಸ್ಟೇಟ್‌ಮೆಂಟ್ ದಾಖಲಿಸಿಕೊಂಡಿರುವ ಡಿಐಜಿ ಜಿನೇಂದ್ರ ಕಣಗಾವಿ, ಎಸ್‌ಪಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೂ ಉತ್ತರ ಪಡೆದಿದ್ದಾರೆ.ವಾರದೊಳಗೆ ಜೈಲಿನಲ್ಲಿನ ಅಕ್ರಮಗಳ ಕುರಿತು ವರದಿ ನೀಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಇನ್ನುಳಿದ ಮೂರು ದಿನಗಳಲ್ಲಿ ಜೈಲು ಡಿಐಜಿ ಅವರ ಹೇಳಿಕೆ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಜಿನೇಂದ್ರ ಕಣಗಾವಿ ಸಂಗ್ರಹಿಸಲಿದ್ದಾರೆ.
ಸಾಕ್ಷ್ಯ ಸಂಗ್ರಹ ಹಾಗೂ ವಿಚಾರಣೆ ಪೂರ್ಣಗೊಂಡ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅಕ್ರಮಗಳ ಕುರಿತು ಡಿಜಿಪಿಗೆ ಅಂತಿಮ ವರದಿ ಸಲ್ಲಿಸಲು ಡಿಐಜಿ ಜಿನೇಂದ್ರ ಕಣಗಾವಿ ಸಿದ್ಧತೆ ನಡೆಸಿದ್ದಾರೆ.
ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ಸಿಲುಕಿದ್ದ ದಂಪತಿಯನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ೧೧೨ ತುರ್ತು ಸಹಾಯವಾಣಿಗೆ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿರುವ ವಿಶಾಲ್ ಮೆಗಾ ಮಾರ್ಟ್‌ನಲ್ಲಿ ರಾತ್ರಿ ವೇಳೆ ತಾಂತ್ರಿಕ ದೋಷದಿಂದ ಲಿಫ್ಟ್ ಏಕಾಏಕಿ ನಾಲ್ಕನೇ ಮಹಡಿಗೆ ತೆರಳಿ ಸ್ಥಗಿತಗೊಂಡಿತ್ತು. ಲಿಫ್ಟ್‌ನ ಬಾಗಿಲುಗಳು ಲಾಕ್ ಆಗಿದ್ದರಿಂದ ದಂಪತಿ ಒಳಗಡೆಯೇ ಸಿಲುಕಿಕೊಂಡಿದ್ದರು.
ತಕ್ಷಣ ದಂಪತಿ ೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು. ಮಾಹಿತಿ ಪಡೆದ ನಮ್ಮ-೧೧೨ ಸಿಬ್ಬಂದಿ, ಇಂದಿರಾನಗರ ಪೊಲೀಸ್ ಠಾಣೆಯ ಹೊಯ್ಸಳ-೩೦ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಗುರುಸ್ವಾಮಿ ಎನ್ ಹಾಗೂ ಹೆಡ್ ಕಾನ್ಸ್ಟೇಬಲ್ ಮುತ್ತಣ್ಣ ಕೆ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಕೇವಲ ೬ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಾಲ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಲಿಫ್ಟ್‌ನ ದೋಷವನ್ನು ಸರಿಪಡಿಸಿ ಬಾಗಿಲು ತೆರೆದಿದ್ದಾರೆ.
ಲಿಫ್ಟ್‌ನೊಳಗೆ ಸಿಲುಕಿದ್ದ ದಂಪತಿಯನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.ತುರ್ತು ಸಂದರ್ಭದಲ್ಲಿ ಹೊಯ್ಸಳ-೩೦ ಸಿಬ್ಬಂದಿಯ ಸಮಯೋಚಿತ ಸ್ಪಂದನೆ ಹಾಗೂ ಮಾಲ್ ಮತ್ತು ಭದ್ರತಾ ಸಿಬ್ಬಂದಿಯ ಸಹಕಾರದಿಂದ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ಬೆಂಗಳೂರು ನಗರ ಪೊಲೀಸರ ತ್ವರಿತ ಹಾಗೂ ಪರಿಣಾಮಕಾರಿ ತುರ್ತು ಪ್ರತಿಕ್ರಿಯೆಗೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.
ತಮಿಳುನಾಡಿನ ಚೆನ್ನೈನ ನಿವಾಸಿಗಳು ವೀಕೆಂಡ್ ಟ್ರಿಪ್‌ಗಾಗಿ ತಮ್ಮ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಸಿಂಗಸಂದ್ರದ ಹೋಟೆಲ್‌ವೊಂದರಲ್ಲಿ ತಂಗಿದ್ದ ಅವರು, ರಾತ್ರಿ ಸಿನಿಮಾ ನೋಡಲು ತೆರಳಿ ಮಧ್ಯರಾತ್ರಿ ಹೋಟೆಲ್‌ಗೆ ವಾಪಸ್ ಆಗಿ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬೀಗ ಹಾಕಿ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ನೋಡಿದಾಗ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಫಾರ್ಚುನರ್ ಕಾರು ನಾಪತ್ತೆಯಾಗಿತ್ತು. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಾರು ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಬಾತ್ಮಿದಾರರಿಂದ ಖಚಿತ ಮಾಹಿತಿ ಸಂಗ್ರಹಿಸಿದ್ದರು. ಜುಲೈ 4ರಂದು ಬೆಳಗಾವಿ–ಪುಣೆ ರಾಷ್ಟ್ರೀಯ ಹೆದ್ದಾರಿಯ ಖರಾದ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ ವೇಳೆ, ಪ್ರಕರಣದ ಪ್ರಮುಖ ಆರೋಪಿ ಕಳುವಾದ ಕಾರಿನ ಸಮೇತ ತಪ್ಪಿಸಿಕೊಂಡಿದ್ದ.
ಈ ವೇಳೆ ಆರೋಪಿಯ ಗೆಳತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಇಬ್ಬರೂ ಸೇರಿ ದುಬಾರಿ ಬೆಲೆಯ ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಉಪ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿತ್ತು. ಜುಲೈ 17ರಂದು ಬಾತ್ಮಿದಾರರ ಖಚಿತ ಮಾಹಿತಿಯ ಮೇರೆಗೆ ಸಿಲ್ಕ್ ಬೋರ್ಡ್ ಬಳಿ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಾರು ಕಳವು ಮಾಡುತ್ತಿದ್ದ ವಿಧಾನವನ್ನು ಬಾಯ್ಬಿಟ್ಟಿದ್ದಾನೆ.
ತನ್ನ ಬಳಿಯಿದ್ದ ಆಧುನಿಕ ಉಪಕರಣಗಳನ್ನು ಬಳಸಿ ನಕಲಿ ಬೀಗದ ಕೀ ತಯಾರಿಸಿ, ಕಾರಿನ ಡೋರ್‌ನ್ನು ತೆರೆದು ಕಾರನ್ನು ಕಳವು ಮಾಡುತ್ತಿದ್ದುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ಕಳವು ಮಾಡಿದ ಕಾರುಗಳನ್ನು ರಾಜಸ್ಥಾನದ ಬರ್ಮೆರ್, ಬಲೋತ್ರ ಸೇರಿದಂತೆ ಮರಳುಗಾಡಿನ ಪ್ರದೇಶಗಳಲ್ಲಿ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಯ ನೀಡಿದ ಮಾಹಿತಿಯ ಆಧಾರದ ಮೇಲೆ ರಾಜಸ್ಥಾನದ ಡೋರೆಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಅಲೇಟಿ ಪ್ರದೇಶದ ಮರಳುಗಾಡಿನಲ್ಲಿ ಅಡಗಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ₹35 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಜುಲೈ 24ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಬಂಧಿತ ಪ್ರಮುಖ ಆರೋಪಿ ಈ ಹಿಂದೆ ಬೆಂಗಳೂರು ನಗರ, ಹೈದರಾಬಾದ್, ರಾಜಸ್ಥಾನ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 21 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿಯನ್ನು ಜುಲೈ 30ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, ಐಪಿಎಸ್ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಸತೀಶ್.ಆರ್ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನವೀನಕುಮಾರ.ಪಿ.ಜಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2026-27ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಒಟ್ಟು 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ದೈಹಿಕ ದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ, ಅಂದರೆ PET/PST, ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಒಟ್ಟು 3991 ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದಕ್ಕೆ 3395 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 596 ಹುದ್ದೆಗಳು ಮೀಸಲಾಗಿವೆ.
ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಆಗಸ್ಟ್ 31, 2026ರಿಂದ ಸೆಪ್ಟೆಂಬರ್ 7, 2026ರವರೆಗೆ ದೈಹಿಕ ಪರೀಕ್ಷೆ ನಡೆಯಲಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 8ರಿಂದ ಸೆಪ್ಟೆಂಬರ್ 10, 2026ರವರೆಗೆ PET/PST ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ಅಡ್ಮಿಷನ್/ಕಾಲ್ ಲೆಟರ್‌ನಲ್ಲಿ ನೀಡಿರುವ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ದೈಹಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಇದೀಗ ಪೊಲೀಸ್ ಇಲಾಖೆಗೆ ಸೇರುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಕೊನೆಯ ಹಂತದ ಸಿದ್ಧತೆ ಅತ್ಯಂತ ಮುಖ್ಯವಾಗಿದ್ದು, ಓಟ ಸೇರಿದಂತೆ ದೈಹಿಕ ಸಾಮರ್ಥ್ಯದ ಅಭ್ಯಾಸವನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ.
ಒಟ್ಟಾರೆ 3991 ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ PET/PST ಪ್ರಮುಖ ಹಂತವಾಗಿದ್ದು, ಅಭ್ಯರ್ಥಿಗಳು ಅಧಿಕೃತ KSP ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗಬೇಕಿದೆ.
ದೈಹಿಕ ಪರೀಕ್ಷೆ ಹೇಗೆ ನಡೆಯಲಿದೆ? ಪ್ರತಿದಿನ ಎಷ್ಟು ಅಭ್ಯರ್ಥಿಗಳಿಗೆ ಅವಕಾಶ?
3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:5ರ ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.
ಅಂದರೆ, ಒಂದು ಹುದ್ದೆಗೆ ಐವರು ಅಭ್ಯರ್ಥಿಗಳಂತೆ ಆಯ್ಕೆ ಮಾಡಿ PET/PST ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಒಂದು ಪರೀಕ್ಷಾ ಕೇಂದ್ರದಲ್ಲಿ ಪ್ರತಿದಿನ ಗರಿಷ್ಠ 600 ಅಭ್ಯರ್ಥಿಗಳಿಗೆ ಮಾತ್ರ ದೈಹಿಕ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ಈ ಸಂಬಂಧ ಆಯಾ ಪೊಲೀಸ್ ಘಟಕಗಳಿಗೆ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಿ, ಆಗಸ್ಟ್ 20ರ ಬೆಳಿಗ್ಗೆ 11 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಎಲ್ಲಾ ವಲಯದ ಐಜಿಪಿಗಳು, ಎಸ್ಪಿಗಳು ಹಾಗೂ ಜಂಟಿ ಪೊಲೀಸ್ ಆಯುಕ್ತರಿಗೆ ನೇಮಕಾತಿ ವಿಭಾಗದ ಡಿಐಜಿಪಿ ಡಾ. ಚೇತನ್ ಸಿಂಗ್ ರಾಥೋರ್ ಸೂಚನೆ ನೀಡಿದ್ದಾರೆ.
ಇನ್ನು ಅಭ್ಯರ್ಥಿಗಳು ಈಗಿನಿಂದಲೇ ದೈಹಿಕ ಪರೀಕ್ಷೆಯ ಸಿದ್ಧತೆಯನ್ನು ಚುರುಕುಗೊಳಿಸಬೇಕಿದೆ. ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸೇರಿದಂತೆ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಹೆಚ್ಚಿನ ಅಭ್ಯಾಸ ಮಾಡುವುದು ಅಗತ್ಯ.
ಇದು ಇಲಾಖೆಯ ಆಂತರಿಕ ಸುತ್ತೋಲೆಯನ್ನು ಆಧರಿಸಿದ ಮಾಹಿತಿ ಆಗಿರುವುದರಿಂದ, ಅಭ್ಯರ್ಥಿಗಳು ಅಧಿಕೃತ ಪ್ರವೇಶ ಪತ್ರ ಮತ್ತು ಅಂತಿಮ ವೇಳಾಪಟ್ಟಿಗಾಗಿ KSP ಅಧಿಕೃತ ಪ್ರಕಟಣೆಯನ್ನು ಪರಿಶೀಲಿಸುವುದು ಮುಖ್ಯ. ಪ್ರವೇಶ ಪತ್ರ ಬಿಡುಗಡೆಯಾದ ಬಳಿಕ ಪ್ರತಿಯೊಬ್ಬ ಅಭ್ಯರ್ಥಿಗೂ ತಮ್ಮ ಪರೀಕ್ಷಾ ಕೇಂದ್ರ, ದಿನಾಂಕ ಹಾಗೂ ನಿಖರ ಸಮಯದ ಮಾಹಿತಿ ಸ್ಪಷ್ಟವಾಗಲಿದೆ.
ಹೀಗಾಗಿ ಪೊಲೀಸ್ ಇಲಾಖೆಗೆ ಸೇರಲು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ, ಸಮಯ ಕಡಿಮೆ ಇದೆ. ಮೈದಾನದ ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿ, ದೈಹಿಕ ಪರೀಕ್ಷೆಗೆ ಸಂಪೂರ್ಣ ಸಿದ್ಧರಾಗಿ.
ಅಣ್ಣಿಗೇರಿ ಪೊಲೀಸ್ ಠಾಣೆಗೆ ಉತ್ತರ ವಲಯ ಬೆಳಗಾವಿಯ ಐಜಿಪಿ ಸಂದೀಪ್ ಪಾಟೀಲ್ IPS ಭೇಟಿ ನೀಡಿ, ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ವಿವಿಧ ವಿಚಾರಗಳ ಕುರಿತು ಪರಿಶೀಲನೆ ನಡೆಸಿದರು.
ಠಾಣೆಗೆ ಆಗಮಿಸಿದ ಐಜಿಪಿ ಸಂದೀಪ್ ಪಾಟೀಲ್ ಅವರಿಗೆ ಪೊಲೀಸ್ ಸಿಬ್ಬಂದಿಯಿಂದ ಗೌರವ ರಕ್ಷೆ ನೀಡಲಾಯಿತು. ಗೌರವ ರಕ್ಷೆಯನ್ನು ಸ್ವೀಕರಿಸಿದ ಬಳಿಕ ಠಾಣಾ ಆವರಣಕ್ಕೆ ಭೇಟಿ ನೀಡಿದ ಅವರು, ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಠಾಣಾ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದರು.
ಈ ವೇಳೆ ಪೊಲೀಸ್ ಠಾಣೆಯ ಆವರಣ, ಪರಿಸರ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಗಮನಹರಿಸಲಾಯಿತು. ಪೊಲೀಸ್ ಇಲಾಖೆಯ ಕರ್ತವ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಮರ ನೆಡುವ ಮೂಲಕ ಸಾರಲಾಯಿತು.
ಐಜಿಪಿ ಸಂದೀಪ್ ಪಾಟೀಲ್ ಅವರ ಠಾಣಾ ಭೇಟಿ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಅಣ್ಣಿಗೇರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸಾಕ್ಷಿಯಾದರು.
ಶಿವಮೊಗ್ಗ ನಗರದ ಸೂಳೆಬೈಲು ಪ್ರದೇಶದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿ, ಶಿಕ್ಷಣದ ಮಹತ್ವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿದ್ಯಾಭ್ಯಾಸದ ಪಾತ್ರದ ಬಗ್ಗೆ ತಿಳಿಸಲಾಯಿತು.
ಇದೇ ವೇಳೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ವಿದ್ಯಾರ್ಥಿಗಳ ಜೀವನದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳು ಹಾಗೂ ಮಾದಕ ವ್ಯಸನದಿಂದ ದೂರವಿರುವ ಅಗತ್ಯತೆ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಮಕ್ಕಳು ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ, ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ನಡೆಸುವಂತೆ ಜಾಗೃತಿ ಮೂಡಿಸಲಾಯಿತು.