ನಕಲಿ ಕೀ ಬಳಸಿ ಕಾರು ಕಳವು – 21 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ

ತಮಿಳುನಾಡಿನ ಚೆನ್ನೈನ ನಿವಾಸಿಗಳು ವೀಕೆಂಡ್ ಟ್ರಿಪ್‌ಗಾಗಿ ತಮ್ಮ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಸಿಂಗಸಂದ್ರದ ಹೋಟೆಲ್‌ವೊಂದರಲ್ಲಿ ತಂಗಿದ್ದ ಅವರು, ರಾತ್ರಿ ಸಿನಿಮಾ ನೋಡಲು ತೆರಳಿ ಮಧ್ಯರಾತ್ರಿ ಹೋಟೆಲ್‌ಗೆ ವಾಪಸ್ ಆಗಿ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬೀಗ ಹಾಕಿ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ನೋಡಿದಾಗ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಫಾರ್ಚುನರ್ ಕಾರು ನಾಪತ್ತೆಯಾಗಿತ್ತು. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಾರು ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಬಾತ್ಮಿದಾರರಿಂದ ಖಚಿತ ಮಾಹಿತಿ ಸಂಗ್ರಹಿಸಿದ್ದರು. ಜುಲೈ 4ರಂದು ಬೆಳಗಾವಿ–ಪುಣೆ ರಾಷ್ಟ್ರೀಯ ಹೆದ್ದಾರಿಯ ಖರಾದ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ ವೇಳೆ, ಪ್ರಕರಣದ ಪ್ರಮುಖ ಆರೋಪಿ ಕಳುವಾದ ಕಾರಿನ ಸಮೇತ ತಪ್ಪಿಸಿಕೊಂಡಿದ್ದ.

ಈ ವೇಳೆ ಆರೋಪಿಯ ಗೆಳತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಇಬ್ಬರೂ ಸೇರಿ ದುಬಾರಿ ಬೆಲೆಯ ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಉಪ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿತ್ತು. ಜುಲೈ 17ರಂದು ಬಾತ್ಮಿದಾರರ ಖಚಿತ ಮಾಹಿತಿಯ ಮೇರೆಗೆ ಸಿಲ್ಕ್ ಬೋರ್ಡ್ ಬಳಿ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಾರು ಕಳವು ಮಾಡುತ್ತಿದ್ದ ವಿಧಾನವನ್ನು ಬಾಯ್ಬಿಟ್ಟಿದ್ದಾನೆ.

ತನ್ನ ಬಳಿಯಿದ್ದ ಆಧುನಿಕ ಉಪಕರಣಗಳನ್ನು ಬಳಸಿ ನಕಲಿ ಬೀಗದ ಕೀ ತಯಾರಿಸಿ, ಕಾರಿನ ಡೋರ್‌ನ್ನು ತೆರೆದು ಕಾರನ್ನು ಕಳವು ಮಾಡುತ್ತಿದ್ದುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ಕಳವು ಮಾಡಿದ ಕಾರುಗಳನ್ನು ರಾಜಸ್ಥಾನದ ಬರ್ಮೆರ್, ಬಲೋತ್ರ ಸೇರಿದಂತೆ ಮರಳುಗಾಡಿನ ಪ್ರದೇಶಗಳಲ್ಲಿ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಯ ನೀಡಿದ ಮಾಹಿತಿಯ ಆಧಾರದ ಮೇಲೆ ರಾಜಸ್ಥಾನದ ಡೋರೆಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಅಲೇಟಿ ಪ್ರದೇಶದ ಮರಳುಗಾಡಿನಲ್ಲಿ ಅಡಗಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ₹35 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಜುಲೈ 24ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಬಂಧಿತ ಪ್ರಮುಖ ಆರೋಪಿ ಈ ಹಿಂದೆ ಬೆಂಗಳೂರು ನಗರ, ಹೈದರಾಬಾದ್, ರಾಜಸ್ಥಾನ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 21 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿಯನ್ನು ಜುಲೈ 30ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, ಐಪಿಎಸ್ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಸತೀಶ್.ಆರ್ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನವೀನಕುಮಾರ.ಪಿ.ಜಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

TRENDING ARTICLES