19 ತಿಂಗಳ ಬೆನ್ನಟ್ಟುವಿಕೆ.. 2.46 ಲಕ್ಷ ಕಿ.ಮೀ. ಪ್ರಯಾಣ.. ಕೊನೆಗೂ ಅಂತರರಾಜ್ಯ ಆರೋಪಿಗಳ ಬಂಧನ!

ಬೀದರ ನಗರದ ಎಸ್‌ಬಿಐ ಬ್ಯಾಂಕ್‌ ಎದುರು ಎಸ್‌ಎಂಎಸ್ ಕಂಪನಿಯ ಎಟಿಎಂ ವ್ಯಾನ್ ಸಿಬ್ಬಂದಿಯ ಮೇಲೆ ಶೂಟೌಟ್ ನಡೆಸಿ, ಕೊಲೆ ಮಾಡಿ ಬರೋಬ್ಬರಿ 83 ಲಕ್ಷ ರೂಪಾಯಿ ಹಣವನ್ನು ದೋಚಿದ್ದ ಪ್ರಕರಣದ ಆರೋಪಿಗಳಿಗಾಗಿ ಬೀದರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಇದೀಗ ಸಿನಿಮೀಯ ತಿರುವು ಪಡೆದುಕೊಂಡಿದೆ.

ಪ್ರಕರಣ ದಾಖಲಾದ ಬಳಿಕ ಆರೋಪಿಗಳ ಬೆನ್ನತ್ತಿದ್ದ ಪೊಲೀಸರಿಗೆ, ಆರೋಪಿಗಳು ರಾಜ್ಯ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಪತ್ತೆಯಾಗಿತ್ತು.

ಆರೋಪಿಗಳ ಪತ್ತೆಗಾಗಿ ಬೀದರ ಪೊಲೀಸರು ಸತತ 19 ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 2 ಲಕ್ಷ 46 ಸಾವಿರದ 140 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿ ಆರೋಪಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.

ಆರೋಪಿಗಳು ಆಗಾಗ ತಮ್ಮ ಸ್ಥಳ ಬದಲಾಯಿಸುತ್ತಾ, ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಆದರೆ ಬೀದರ ಜಿಲ್ಲಾ ಪೊಲೀಸರ ನಿರಂತರ ಬೆನ್ನಟ್ಟುವಿಕೆ ಮತ್ತು ನಿಖರ ಮಾಹಿತಿಯ ಆಧಾರದ ಮೇಲೆ ಕೊನೆಗೂ ಆರೋಪಿಗಳ ಸುಳಿವು ಪತ್ತೆಯಾಗಿದೆ.

ಅಂತರರಾಜ್ಯ ಮಟ್ಟದಲ್ಲಿ ಕುಖ್ಯಾತರಾಗಿದ್ದ ಆರೋಪಿತರ ಕೋಟೆಗೆ ನುಗ್ಗಿದ ಬೀದರ ಜಿಲ್ಲಾ ಪೊಲೀಸರು, ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೂಟೌಟ್ ನಡೆಸಿ ಎಟಿಎಂ ವ್ಯಾನ್‌ನಿಂದ ₹83 ಲಕ್ಷ ಹಣ ಲೂಟಿ ಮಾಡಿದ್ದ ಆರೋಪಿಗಳ ಬಂಧನದೊಂದಿಗೆ, ಬೀದರ ಪೊಲೀಸರ ಸತತ 19 ತಿಂಗಳ ಕಾರ್ಯಾಚರಣೆಗೆ ಮಹತ್ವದ ಯಶಸ್ಸು ಸಿಕ್ಕಿದೆ.

ಅಪರಾಧ ಎಷ್ಟೇ ದೊಡ್ಡದಾಗಿರಲಿ.. ಆರೋಪಿಗಳು ಎಷ್ಟೇ ದೂರ ಓಡಿರಲಿ.. ಬೀದರ ಪೊಲೀಸರ ತನಿಖೆಯ ಬಲೆಗೆ ಕೊನೆಗೂ ಸಿಲುಕಲೇಬೇಕು ಎಂಬುದನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ.

Related Articles

TRENDING ARTICLES