ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ಸಿಲುಕಿದ್ದ ದಂಪತಿಯನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ೧೧೨ ತುರ್ತು ಸಹಾಯವಾಣಿಗೆ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿರುವ ವಿಶಾಲ್ ಮೆಗಾ ಮಾರ್ಟ್‌ನಲ್ಲಿ ರಾತ್ರಿ ವೇಳೆ ತಾಂತ್ರಿಕ ದೋಷದಿಂದ ಲಿಫ್ಟ್ ಏಕಾಏಕಿ ನಾಲ್ಕನೇ ಮಹಡಿಗೆ ತೆರಳಿ ಸ್ಥಗಿತಗೊಂಡಿತ್ತು. ಲಿಫ್ಟ್‌ನ ಬಾಗಿಲುಗಳು ಲಾಕ್ ಆಗಿದ್ದರಿಂದ ದಂಪತಿ ಒಳಗಡೆಯೇ ಸಿಲುಕಿಕೊಂಡಿದ್ದರು.

ತಕ್ಷಣ ದಂಪತಿ ೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು. ಮಾಹಿತಿ ಪಡೆದ ನಮ್ಮ-೧೧೨ ಸಿಬ್ಬಂದಿ, ಇಂದಿರಾನಗರ ಪೊಲೀಸ್ ಠಾಣೆಯ ಹೊಯ್ಸಳ-೩೦ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಗುರುಸ್ವಾಮಿ ಎನ್ ಹಾಗೂ ಹೆಡ್ ಕಾನ್ಸ್ಟೇಬಲ್ ಮುತ್ತಣ್ಣ ಕೆ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಕೇವಲ ೬ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಾಲ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಲಿಫ್ಟ್‌ನ ದೋಷವನ್ನು ಸರಿಪಡಿಸಿ ಬಾಗಿಲು ತೆರೆದಿದ್ದಾರೆ.
ಲಿಫ್ಟ್‌ನೊಳಗೆ ಸಿಲುಕಿದ್ದ ದಂಪತಿಯನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.ತುರ್ತು ಸಂದರ್ಭದಲ್ಲಿ ಹೊಯ್ಸಳ-೩೦ ಸಿಬ್ಬಂದಿಯ ಸಮಯೋಚಿತ ಸ್ಪಂದನೆ ಹಾಗೂ ಮಾಲ್ ಮತ್ತು ಭದ್ರತಾ ಸಿಬ್ಬಂದಿಯ ಸಹಕಾರದಿಂದ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ಬೆಂಗಳೂರು ನಗರ ಪೊಲೀಸರ ತ್ವರಿತ ಹಾಗೂ ಪರಿಣಾಮಕಾರಿ ತುರ್ತು ಪ್ರತಿಕ್ರಿಯೆಗೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.


