CPC ದೈಹಿಕ ಪರೀಕ್ಷೆ 2026: ದಿನಾಂಕ ಪ್ರಕಟ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2026-27ನೇ ಸಾಲಿನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಒಟ್ಟು 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ದೈಹಿಕ ದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ, ಅಂದರೆ PET/PST, ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಒಟ್ಟು 3991 ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದಕ್ಕೆ 3395 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 596 ಹುದ್ದೆಗಳು ಮೀಸಲಾಗಿವೆ.

ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಆಗಸ್ಟ್ 31, 2026ರಿಂದ ಸೆಪ್ಟೆಂಬರ್ 7, 2026ರವರೆಗೆ ದೈಹಿಕ ಪರೀಕ್ಷೆ ನಡೆಯಲಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 8ರಿಂದ ಸೆಪ್ಟೆಂಬರ್ 10, 2026ರವರೆಗೆ PET/PST ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಅಡ್ಮಿಷನ್/ಕಾಲ್ ಲೆಟರ್‌ನಲ್ಲಿ ನೀಡಿರುವ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ದೈಹಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದೀಗ ಪೊಲೀಸ್ ಇಲಾಖೆಗೆ ಸೇರುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಕೊನೆಯ ಹಂತದ ಸಿದ್ಧತೆ ಅತ್ಯಂತ ಮುಖ್ಯವಾಗಿದ್ದು, ಓಟ ಸೇರಿದಂತೆ ದೈಹಿಕ ಸಾಮರ್ಥ್ಯದ ಅಭ್ಯಾಸವನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ.

ಒಟ್ಟಾರೆ 3991 ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ PET/PST ಪ್ರಮುಖ ಹಂತವಾಗಿದ್ದು, ಅಭ್ಯರ್ಥಿಗಳು ಅಧಿಕೃತ KSP ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗಬೇಕಿದೆ.

ದೈಹಿಕ ಪರೀಕ್ಷೆ ಹೇಗೆ ನಡೆಯಲಿದೆ? ಪ್ರತಿದಿನ ಎಷ್ಟು ಅಭ್ಯರ್ಥಿಗಳಿಗೆ ಅವಕಾಶ?

3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:5ರ ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.

ಅಂದರೆ, ಒಂದು ಹುದ್ದೆಗೆ ಐವರು ಅಭ್ಯರ್ಥಿಗಳಂತೆ ಆಯ್ಕೆ ಮಾಡಿ PET/PST ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಒಂದು ಪರೀಕ್ಷಾ ಕೇಂದ್ರದಲ್ಲಿ ಪ್ರತಿದಿನ ಗರಿಷ್ಠ 600 ಅಭ್ಯರ್ಥಿಗಳಿಗೆ ಮಾತ್ರ ದೈಹಿಕ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ಈ ಸಂಬಂಧ ಆಯಾ ಪೊಲೀಸ್ ಘಟಕಗಳಿಗೆ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಿ, ಆಗಸ್ಟ್ 20ರ ಬೆಳಿಗ್ಗೆ 11 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಎಲ್ಲಾ ವಲಯದ ಐಜಿಪಿಗಳು, ಎಸ್ಪಿಗಳು ಹಾಗೂ ಜಂಟಿ ಪೊಲೀಸ್ ಆಯುಕ್ತರಿಗೆ ನೇಮಕಾತಿ ವಿಭಾಗದ ಡಿಐಜಿಪಿ ಡಾ. ಚೇತನ್ ಸಿಂಗ್ ರಾಥೋರ್ ಸೂಚನೆ ನೀಡಿದ್ದಾರೆ.

ಇನ್ನು ಅಭ್ಯರ್ಥಿಗಳು ಈಗಿನಿಂದಲೇ ದೈಹಿಕ ಪರೀಕ್ಷೆಯ ಸಿದ್ಧತೆಯನ್ನು ಚುರುಕುಗೊಳಿಸಬೇಕಿದೆ. ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸೇರಿದಂತೆ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಹೆಚ್ಚಿನ ಅಭ್ಯಾಸ ಮಾಡುವುದು ಅಗತ್ಯ.

ಇದು ಇಲಾಖೆಯ ಆಂತರಿಕ ಸುತ್ತೋಲೆಯನ್ನು ಆಧರಿಸಿದ ಮಾಹಿತಿ ಆಗಿರುವುದರಿಂದ, ಅಭ್ಯರ್ಥಿಗಳು ಅಧಿಕೃತ ಪ್ರವೇಶ ಪತ್ರ ಮತ್ತು ಅಂತಿಮ ವೇಳಾಪಟ್ಟಿಗಾಗಿ KSP ಅಧಿಕೃತ ಪ್ರಕಟಣೆಯನ್ನು ಪರಿಶೀಲಿಸುವುದು ಮುಖ್ಯ. ಪ್ರವೇಶ ಪತ್ರ ಬಿಡುಗಡೆಯಾದ ಬಳಿಕ ಪ್ರತಿಯೊಬ್ಬ ಅಭ್ಯರ್ಥಿಗೂ ತಮ್ಮ ಪರೀಕ್ಷಾ ಕೇಂದ್ರ, ದಿನಾಂಕ ಹಾಗೂ ನಿಖರ ಸಮಯದ ಮಾಹಿತಿ ಸ್ಪಷ್ಟವಾಗಲಿದೆ.

ಹೀಗಾಗಿ ಪೊಲೀಸ್ ಇಲಾಖೆಗೆ ಸೇರಲು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ, ಸಮಯ ಕಡಿಮೆ ಇದೆ. ಮೈದಾನದ ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿ, ದೈಹಿಕ ಪರೀಕ್ಷೆಗೆ ಸಂಪೂರ್ಣ ಸಿದ್ಧರಾಗಿ.

Related Articles

TRENDING ARTICLES