LATEST ARTICLES

ಬೆಂಗಳೂರು ಪೊಲೀಸರ ಮೆಗಾ ಕಾರ್ಯಾಚರಣೆ.. 503 ಬಾಲ ಕಾರ್ಮಿಕರಿಗೆ ಮುಕ್ತಿ

0

ಬೆಂಗಳೂರು ನಗರದಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿದೆ. ಮಕ್ಕಳ ಕೈಯಲ್ಲಿ ಪುಸ್ತಕ, ಪೆನ್ನು ಇರಬೇಕಾದ ವಯಸ್ಸಿನಲ್ಲಿ ದುಡಿಮೆಯ ಹೊರೆ ಹೊರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರದಾದ್ಯಂತ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಯಿತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಲೇಬರ್ ಇನ್ಸ್ಪೆಕ್ಟರ್‌ಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿ, ನಗರದ ವಿವಿಧ ಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಯಿತು.

ವಾಣಿಜ್ಯ ಸಂಕೀರ್ಣಗಳು, ಅಂಗಡಿ-ಮುಂಗಟ್ಟುಗಳು, ಕೈಗಾರಿಕಾ ಪ್ರದೇಶಗಳು ಹಾಗೂ ಇನ್ನಿತರ ಕೆಲಸದ ಸ್ಥಳಗಳನ್ನು ಗುರಿಯಾಗಿಸಿಕೊಂಡು ವಿಶೇಷ ತಂಡಗಳು ದಿಢೀರ್ ಕಾರ್ಯಾಚರಣೆ ನಡೆಸಿದವು. ಒಟ್ಟು 5,897 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ವಿವಿಧೆಡೆ ಕೆಲಸ ಮಾಡುತ್ತಿದ್ದ 503 ಬಾಲ ಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದೆ.

ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಕಂಡುಬಂದ ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವ ಮೂಲಕ ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ಅಡ್ಡಿಪಡಿಸುತ್ತಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದ ಎಲ್ಲಾ ವಿಭಾಗಗಳಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅಂಗಡಿ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಒಟ್ಟು 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ.

ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕುವುದು ಹಾಗೂ ಬಾಲ ಕಾರ್ಮಿಕರನ್ನು ರಕ್ಷಿಸಿ ಅವರ ಹಕ್ಕುಗಳನ್ನು ಕಾಪಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆದ ಕಾರ್ಯಾಚರಣೆಯಿಂದ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದವರಿಗೆ ಕಾನೂನಿನ ಬಿಸಿ ಮುಟ್ಟಿದೆ.

ಈ ವಿಶೇಷ ಕಾರ್ಯಾಚರಣೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಪಿಎಸ್., ಅಪರ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಐಪಿಎಸ್., ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ, ಐಪಿಎಸ್., ಹಾಗೂ ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್. ಬಿ, ಐಪಿಎಸ್., ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಎಲ್ಲಾ ವಿಭಾಗಗಳ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ, ಎಲ್ಲಾ ಉಪ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸ್ಪೆಕ್ಟರ್‌ಗಳು, ಲೇಬರ್ ಇನ್ಸ್ಪೆಕ್ಟರ್‌ಗಳು ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಬಾಲ ಕಾರ್ಮಿಕರನ್ನು ಗುರುತಿಸಿ ರಕ್ಷಿಸುವಲ್ಲಿ ವಿಶೇಷ ತಂಡಗಳು ಯಶಸ್ವಿಯಾಗಿವೆ.

ಒಂದೇ ದಿನ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ 5,897 ಸ್ಥಳಗಳನ್ನು ಪರಿಶೀಲಿಸಿ 503 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿರುವುದು ಕಾರ್ಯಾಚರಣೆಯ ವ್ಯಾಪಕತೆಯನ್ನು ತೋರಿಸುತ್ತದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದವರ ವಿರುದ್ಧ 18 ಪ್ರಕರಣಗಳನ್ನು ದಾಖಲಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಸಂದೇಶವನ್ನು ರವಾನಿಸಿದೆ.

ಮಕ್ಕಳಿಗೆ ದುಡಿಮೆಗಿಂತ ಶಿಕ್ಷಣ ಮುಖ್ಯ. ಅವರ ಕೈಯಲ್ಲಿ ಕೆಲಸದ ಸಲಕರಣೆಗಳ ಬದಲು ಪುಸ್ತಕ ಮತ್ತು ಪೆನ್ನು ಇರಬೇಕು. ಬಾಲ್ಯವನ್ನು ದುಡಿಮೆಯಲ್ಲಿ ಕಳೆಯದಂತೆ ಮಕ್ಕಳನ್ನು ರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ನಡೆಸಿರುವ ಈ ಜಂಟಿ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಪಿಜಿ ಬಳಿ ಬೈಕ್ ಕಳವು.. ಆರೋಪಿಯನ್ನು ಬಂಧಿಸಿದ ಮಡಿವಾಳ ಪೊಲೀಸರು

0

ಪಿಜಿ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.ಬಿಟಿಎಂ ೧ನೇ ಹಂತದ ಮಾರುತಿನಗರದ ಪಿಜಿಯೊಂದರ ಬಳಿ ಪಿರ್ಯಾದುದಾರರು ತಮ್ಮ ದ್ವಿಚಕ್ರ ವಾಹನವನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದರು. ಬೆಳಗ್ಗೆ ನೋಡಿದಾಗ ವಾಹನ ಕಳುವಾಗಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಬಾತ್ಮೀದಾರರಿಂದ ಖಚಿತ ಮಾಹಿತಿ ಸಂಗ್ರಹಿಸಿದ್ದರು.

ಈ ಮಾಹಿತಿ ಆಧರಿಸಿ ಮಾರುತಿನಗರದ ೩ನೇ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಳುವಾಗಿದ್ದ ದ್ವಿಚಕ್ರ ವಾಹನ ಸಮೇತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ವಿಚಾರಣೆ ವೇಳೆ ಆರೋಪಿ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯ ವಶದಿಂದ ಸುಮಾರು ೨ ಲಕ್ಷ ರೂಪಾಯಿ ಮೌಲ್ಯದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಮೊಹಮ್ಮದ್ ಸುಜೀತ್.ಎಂ.ಎಸ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಾಸುದೇವ್.ವಿ.ಕೆ. ಅವರ ನೇತೃತ್ವದಲ್ಲಿ, ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್. ಹಾಗೂ ಅಧಿಕಾರಿ-ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಸುಪ್ರೀಂ ಆದೇಶದ ನಕಲು ಮಾಡಿ ಕೈದಿ ಬಿಡುಗಡೆ

0

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನೇ ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೈಲಿನಿಂದ ಬಿಡುಗಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನಿಖೆಯಲ್ಲಿ, ಶಿಕ್ಷಾ ಬಂದಿ ಶಂಕರ್.ಎ ಚಿಕ್ಕಪೇಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಹಾಗೂ ೧೦ ಸಾವಿರ ರೂಪಾಯಿ ದಂಡಕ್ಕೆ ಗುರಿಯಾಗಿರುವುದು ಪತ್ತೆಯಾಗಿದೆ.ಶಿಕ್ಷೆ ರದ್ದುಪಡಿಸುವಂತೆ ಶಂಕರ್.ಎ ಕರ್ನಾಟಕ ಹೈಕೋರ್ಟ್ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಖಾಯಂಗೊಂಡಿತ್ತು.

ಇದರ ನಡುವೆಯೇ, ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಎಸ್‌ಡಿಎ ಹಾಗೂ ಪ್ರಸ್ತುತ ಎಫ್‌ಡಿಎ ಆಗಿರುವ ಶ್ರೀಕಾಂತ್ ಎಸ್., ಸರ್ವೋಚ್ಚ ನ್ಯಾಯಾಲಯದ ಆದೇಶದ ಮಾದರಿಯಲ್ಲಿ ನಕಲಿ ದಾಖಲೆಯನ್ನು ಸಿದ್ಧಪಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದಿಂದ ಶಂಕರ್.ಎ ಬಿಡುಗಡೆಗೆ ಆದೇಶವಾಗಿರುವಂತೆ ನಕಲಿ ದಾಖಲೆ ಸೃಷ್ಟಿಸಿ, ಅದರ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್.ಎ ಅವರನ್ನು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಶಂಕರ್.ಎ ಅವರ ಪತ್ನಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ, ಅಂದಿನ ಮುಖ್ಯ ಅಧೀಕ್ಷಕರೂ ತನ್ನ ಪತಿಯನ್ನು ಬಿಡುಗಡೆಗೊಳಿಸಲು ಸಹಕರಿಸಿದ್ದರು ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್.ಎ ಅವರನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದೇ ಪ್ರಕರಣದಲ್ಲಿ ಎಫ್‌ಡಿಎ ಶ್ರೀಕಾಂತ್ ಅವರನ್ನೂ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ. ನಾರಾಯಣ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸತೀಶ್.ಕೆ.ಎಂ ಅವರ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ-ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

0

ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೀವ್ರ ಮಾನಸಿಕ ಸಂಕಷ್ಟದಲ್ಲಿದ್ದ 30 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಸಮಯೋಚಿತವಾಗಿ ರಕ್ಷಿಸಿದ್ದಾರೆ.

ಸೆಪ್ಟೆಂಬರ್ 9ರಂದು ರಾತ್ರಿ 10 ಗಂಟೆ 38 ನಿಮಿಷಕ್ಕೆ ಚೋಳರಪಾಳ್ಯದ 10ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಮಹಿಳೆಯೊಬ್ಬರು ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಆಕೆಯ ಸಹೋದರಿ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು.

ಮಾಹಿತಿ ಬಂದ ಕೂಡಲೇ 112 ಸಿಬ್ಬಂದಿ, ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಹೊಯ್ಸಳ-87ರಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಲೆಂಕಪ್ಪ ವಿ.ಕೆ. ಹಾಗೂ ಎಪಿಸಿ ಶರಣಬಸಪ್ಪ ಬಿ.ಟಿ. ಅವರಿಗೆ ಮಾಹಿತಿ ರವಾನಿಸಿದ್ದರು.

ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ, ಮಹಿಳೆಯೊಂದಿಗೆ ಮಾತನಾಡಿ ಆಕೆಯನ್ನು ಸಮಾಧಾನಪಡಿಸಿ, ಸೂಕ್ತ ಆಪ್ತಸಮಾಲೋಚನೆ ನಡೆಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಕುಟುಂಬದವರ ಬೆಂಬಲ ಪಡೆಯುವ ಮಹತ್ವದ ಕುರಿತು ತಿಳಿವಳಿಕೆ ನೀಡಿದ ಪೊಲೀಸರು, ಮಹಿಳೆಯ ಮೇಲೆ ನಿರಂತರವಾಗಿ ಗಮನಹರಿಸುವಂತೆ ಆಕೆಯ ಸಹೋದರಿಗೆ ಸೂಚಿಸಿದ್ದಾರೆ.

ಪೊಲೀಸರ ಸಮಯೋಚಿತ ಕಾರ್ಯಾಚರಣೆ, ಆಪ್ತಸಮಾಲೋಚನೆ ಹಾಗೂ ಕುಟುಂಬದವರ ಸಹಕಾರದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ತೀವ್ರ ಮಾನಸಿಕ ಸಂಕಷ್ಟದಲ್ಲಿರುವ ವ್ಯಕ್ತಿಗಳ ಕುರಿತು ಮಾಹಿತಿ ದೊರೆತ ತಕ್ಷಣ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ: ಲಿಫ್ಟ್‌ನಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

0

ಬೆಂಗಳೂರಿನ ಎಸ್.ಜೆ. ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಸೆಪ್ಟೆಂಬರ್ 8ರಂದು ಸಂಜೆ 4 ಗಂಟೆ 10 ನಿಮಿಷಕ್ಕೆ ಎಸ್.ಬಿ. ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್‌ವೊಂದರ ಲಿಫ್ಟ್‌ನಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದರು.

ಲಿಫ್ಟ್‌ನಿಂದ ಹೊರಬರಲಾಗದೆ ತುರ್ತು ಸಹಾಯಕ್ಕಾಗಿ ಯುವಕರು ನಮ್ಮ-112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು.ಮಾಹಿತಿ ಪಡೆದ ಕೂಡಲೇ ನಮ್ಮ-112 ಸಿಬ್ಬಂದಿ, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೊಯ್ಸಳ-72ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಮಲ್ಲೇಶ್ ಎನ್. ಹಾಗೂ ಎಎಚ್‌ಸಿ ಸುನಿಲ್ ಕುಮಾರ್ ಎಸ್. ಅವರಿಗೆ ಮಾಹಿತಿ ರವಾನಿಸಿದ್ದರು.

ಮಾಹಿತಿ ಬಂದ ಕೇವಲ 3 ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.ಬಳಿಕ ಲಿಫ್ಟ್ ನಿರ್ವಹಣಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಲಿಫ್ಟ್‌ನ ಬಾಗಿಲು ತೆರೆಯಿಸಿ, ಒಳಗೆ ಸಿಲುಕಿದ್ದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

ಪೊಲೀಸರ ಸಮಯೋಚಿತ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಬ್ಬರನ್ನೂ ರಕ್ಷಿಸಲಾಗಿದೆ.ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ವಿಳಂಬ ಮಾಡದೆ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಈ ಕಾರ್ಯಾಚರಣೆ ಬೆಂಗಳೂರು ನಗರ ಪೊಲೀಸರ ತ್ವರಿತ ಹಾಗೂ ಪರಿಣಾಮಕಾರಿ ಸ್ಪಂದನೆಗೆ ಮತ್ತೊಂದು ಉದಾಹರಣೆಯಾಗಿದೆ.

ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ: 1,300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

0

ಸೆಪ್ಟೆಂಬರ್ 10ರಂದು ಬಳ್ಳಾರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ.ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಕೈಗೊಂಡಿದ್ದು, ನಗರದಲ್ಲಿ ಸುಗಮ ಸಂಚಾರಕ್ಕಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಮಾವೇಶದ ಭದ್ರತೆಗಾಗಿ 3 ಜನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 4 ಜನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 12 ಡಿವೈಎಸ್ಪಿಗಳು, 40 ಸಿಪಿಐ-ಪಿಐಗಳು, 63 ಪಿಎಸ್ಐಗಳು, 120 ಎಎಸ್ಐಗಳು ಹಾಗೂ 960 ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.ಇದರ ಜೊತೆಗೆ 200 ಹೋಂಗಾರ್ಡ್ಸ್, 12 ಐಆರ್‌ಬಿ-ಕೆಎಸ್‌ಆರ್‌ಪಿ ತುಕಡಿಗಳು, 6 ಡಿಎಆರ್ ತುಕಡಿಗಳು ಹಾಗೂ ಒಂದು ಕ್ಯೂಆರ್‌ಟಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇನ್ನು ಸಾರ್ವಜನಿಕರ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿದೆ.ಗಡಿಗಿ ಚೆನ್ನಪ್ಪ ವೃತ್ತ, ಇಂದಿರಾ ವೃತ್ತ, ದುರ್ಗಮ್ಮ ದೇವಸ್ಥಾನ ಸರ್ಕಲ್, ಎಸ್.ಪಿ. ವೃತ್ತ ಹಾಗೂ ಹೆಚ್.ಆರ್.ಗವಿಯಪ್ಪ ವೃತ್ತದ ರಸ್ತೆಗಳನ್ನು ಬಳಸದೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಸಿರುಗುಪ್ಪ ಕಡೆಯಿಂದ ಬರುವ ವಾಹನಗಳು ವಾಲ್ಮೀಕಿ ವೃತ್ತ, ದುರ್ಗಮ್ಮ ಗುಡಿ ಸರ್ಕಲ್ ಮಾರ್ಗವಾಗಿ ಮೋಕಾ ರಸ್ತೆ ಬಳಸಬೇಕು.ಬೆಂಗಳೂರು ಕಡೆಯಿಂದ ಬರುವ ವಾಹನಗಳು ಅನಂತಪುರ ಬೈಪಾಸ್ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಬಸ್ಸುಗಳಲ್ಲಿ ಬರುವ ಕಾರ್ಯಕರ್ತರನ್ನು ಸಂಗಮ್ ಸರ್ಕಲ್‌ನಲ್ಲಿ ಇಳಿಸಿ, ಬಸ್ಸುಗಳನ್ನು ಅನಂತಪುರ ರಸ್ತೆ ಬೈಪಾಸ್ ಹಾಗೂ ಮೋಕಾ ರಸ್ತೆಯಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ.ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೂ ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮಾವೇಶದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಮನವಿ ಮಾಡಿದ್ದಾರೆ.

0

ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

2021ರ ಜುಲೈ 19ರಂದು ಬನಶಂಕರಿ 3ನೇ ಹಂತದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಗಿರಿನಗರ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದ ಭಗೀರತ್ ದೆವಾಸಿ ಎಂಬಾತನನ್ನು ವಶಕ್ಕೆ ಪಡೆದಿದ್ದರು.

ಆರೋಪಿಯಿಂದ 2 ಕೆ.ಜಿ. 40 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದರು.ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಎಲ್. ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಧೀಶ ಆನಂದ್ ಅವರು, 2026ರ ಆಗಸ್ಟ್ 29ರಂದು ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀವಾಣಿ ಅವರು ವಾದ ಮಂಡಿಸಿದ್ದರು.

ಲಾಡ್ಜ್ ರೂಮ್‌ನಲ್ಲಿ ಕೂಡಿ ಹಾಕಿದ್ದ ಇಬ್ಬರ ರಕ್ಷಣೆ: 12 ನಿಮಿಷದಲ್ಲೇ ಪೊಲೀಸರ ಎಂಟ್ರಿ

0

ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಘಟನೆ ನಡೆದಿದೆ.ಸೆಪ್ಟೆಂಬರ್ 8ರಂದು ಮಧ್ಯಾಹ್ನ 1 ಗಂಟೆ 16 ನಿಮಿಷಕ್ಕೆ ಲಾಡ್ಜ್‌ನ ಕೊಠಡಿಯೊಂದರಲ್ಲಿ ಮಹಿಳೆ ಹಾಗೂ ಓರ್ವ ವ್ಯಕ್ತಿಯನ್ನು ಕೂಡಿ ಹಾಕಿ, ಹೊರಗಿನಿಂದ ಬೀಗ ಹಾಕಲಾಗಿತ್ತು.

ಕೊಠಡಿಯೊಳಗಿದ್ದ ವ್ಯಕ್ತಿ ಕೂಡಲೇ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಪೊಲೀಸರ ಸಹಾಯ ಕೋರಿದ್ದಾರೆಮಾಹಿತಿ ಪಡೆದ 112 ಸಿಬ್ಬಂದಿ, ಬೇಗೂರು ಪೊಲೀಸ್ ಠಾಣೆಯ ಹೊಯ್ಸಳ-214ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಸತೀಶ್ ಕುಮಾರ್ ಹಾಗೂ ಎಪಿಸಿ ಮಂಜುನಾಥ್ ಬಿ.ಕೆ. ಅವರಿಗೆ ಮಾಹಿತಿ ರವಾನಿಸಿದ್ದಾರೆ.

ಮಾಹಿತಿ ಬಂದ ಕೇವಲ 12 ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಲಾಡ್ಜ್ ಮಾಲೀಕರೊಂದಿಗೆ ಸಮನ್ವಯ ಸಾಧಿಸಿ, ಕೊಠಡಿಯ ನಕಲಿ ಕೀ ಪಡೆದು ಒಳಗಿದ್ದ ಮಹಿಳೆ ಹಾಗೂ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬಳಿಕ ಇಬ್ಬರನ್ನು ಕೊಠಡಿಯೊಳಗೆ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿದ್ದ ಬೀರೇಂದ್ರ ಬೌರಾ ಎಂಬ ವ್ಯಕ್ತಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ.ಪೊಲೀಸರ ತ್ವರಿತ ಹಾಗೂ ಸಮಯೋಚಿತ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ವಿಳಂಬ ಮಾಡದೆ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

14 ಪ್ರಶಸ್ತಿ ಗೆದ್ದು ಚಾಂಪಿಯನ್‌ ಆದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್

0

8ನೇ ಸೆಂಟ್ರಲ್ ರೇಂಜ್ ಪೊಲೀಸ್ ಡ್ಯೂಟಿ ಮೀಟ್–2026ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ತಂಡ ಅತ್ಯುತ್ತಮ ಸಾಧನೆ ಮಾಡಿದೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ತಮ್ಮ ಪ್ರತಿಭೆ ಮತ್ತು ಕರ್ತವ್ಯ ಕೌಶಲ್ಯವನ್ನು ಪ್ರದರ್ಶಿಸಿ ಒಟ್ಟು 14 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಅತ್ಯುತ್ತಮ ಪ್ರದರ್ಶನದ ಮೂಲಕ “ಚಾಂಪಿಯನ್ ತಂಡ”ವಾಗಿ ಹೊರಹೊಮ್ಮಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ತಂಡಕ್ಕೆ ಹೆಮ್ಮೆಯ ಗರಿ ಮೂಡಿದೆ.

ಈ ಸಾಧನೆಗೈದ ಎಲ್ಲಾ ಪದಕ ವಿಜೇತ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದೆ.ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ವೃತ್ತಿಪರ ಕೌಶಲ್ಯದಿಂದ ಜಿಲ್ಲೆಗೆ ಕೀರ್ತಿ ತಂದಿರುವ ಪೊಲೀಸ್ ಸಿಬ್ಬಂದಿಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬಾಣಸವಾಡಿ ಪೊಲೀಸರ ಭರ್ಜರಿ ಬೇಟೆ: ₹77.50 ಲಕ್ಷದ ಮಾಲು ಜಪ್ತಿ

0

ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟ್‌ನಲ್ಲಿ ನಡೆದ ₹14 ಲಕ್ಷ ನಗದು ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.ಕುಟುಂಬ ಸಮೇತರಾಗಿ ಊಟಕ್ಕೆ ತೆರಳಿದ್ದ ವೇಳೆ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ವಾರ್ಡ್ರೋಬ್‌ನಲ್ಲಿದ್ದ ₹14 ಲಕ್ಷ ನಗದು ಇದ್ದ ಬ್ಯಾಗ್‌ನ್ನು ಕಳವು ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿ ಆಧರಿಸಿ ಜುಲೈ 29ರಂದು ಕಲ್ಯಾಣನಗರ ಸರ್ವಿಸ್ ರಸ್ತೆಯ ಬಳಿ ಇಬ್ಬರು ಆರೋಪಿಗಳನ್ನು ಕಾರು ಹಾಗೂ ₹34 ಸಾವಿರ ನಗದು ಸಮೇತ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಬಾಣಸವಾಡಿ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದ ಬಳಿಕ, ಅವರ ಮಾಹಿತಿ ಮೇರೆಗೆ ಜ್ಯೂವೆಲರಿ ಅಂಗಡಿಗಳು ಹಾಗೂ ಆರೋಪಿಯ ಮನೆಯಿಂದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹2.70 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಇದರೊಂದಿಗೆ ಆರೋಪಿಗಳ ಬಂಧನದಿಂದ ಒಟ್ಟು 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು, ₹3.04 ಲಕ್ಷ ನಗದು ಹಾಗೂ ಒಂದು ಕಾರು ಜಪ್ತಿಯಾಗಿದ್ದು, ಇವುಗಳ ಒಟ್ಟು ಮೌಲ್ಯ ₹77.50 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಬಂಧನದಿಂದ ಬಾಣಸವಾಡಿ ಹಾಗೂ ಹೆಣ್ಣೂರು ಠಾಣೆಯ ತಲಾ ಎರಡು ಪ್ರಕರಣಗಳು, ಮೈಕೋ ಲೇಔಟ್, ಮಾದನಾಯಕನಹಳ್ಳಿ ಹಾಗೂ ಕೊಳ್ಳೇಗಾಲ ಟೌನ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳು ಪತ್ತೆಯಾಗಿವೆ.

ಬಂಧಿತ ಇಬ್ಬರು ಆರೋಪಿಗಳನ್ನು ಆಗಸ್ಟ್ 18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪ ವಿಭಾಗದ ಎಸಿಪಿ ಅನುಷಾ ಜಿ. ಅವರ ನೇತೃತ್ವದಲ್ಲಿ, ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್ ಸುದರ್ಶನ್ ಹೆಚ್.ಸಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.