ಶಿರಸಿ: ನಗರದಲ್ಲಿ ನಡೆಯುತ್ತಿದ್ದ ಇಸ್ಪೀಟ್, ಓಸಿ-ಮಟ್ಕಾ, ಗಾಂಜಾ ಮಾರಾಟ ಹಾಗೂ ಅಕ್ರಮ ಮರಳು ಸಾಗಾಟದ ವಿರುದ್ಧ ಶಿರಸಿ ಪೊಲೀಸರು ಸಮರ ಸಾರಿದ್ದಾರೆ.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಹಲವು ದಿಟ್ಟ ಕಾರ್ಯಾಚರಣೆ ನಡೆಸಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ, ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಗೂ ಗಾಂಜಾ ಮಾರಾಟಗಾರರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಪುಡಿ ರೌಡಿಗಳ ಪುಂಡಾಟಿಕೆ ನಿಯಂತ್ರಿಸಿ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕೆಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ.
ಶಿರಸಿ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರ ನೇತೃತ್ವದಲ್ಲೂ ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿದಿದೆ.
ಖಡಕ್ ಅಧಿಕಾರಿಗಳ ದಕ್ಷ ಕಾರ್ಯಾಚರಣೆಯಿಂದ ಶಿರಸಿಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ್ದು, ನಗರ ಮತ್ತೆ ಶಾಂತಿಯ ಹಾದಿಯಲ್ಲಿ ಸಾಗುತ್ತಿದೆ.
ಯಶವಂತಪುರ ಪೊಲೀಸ್ ಠಾಣೆಯ ರೌಡಿ ವ್ಯಕ್ತಿ ಜಮ್ಶೀದ್ ಖಾನ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.
ಯಶವಂತಪುರ ಸೇರಿದಂತೆ ಆರ್‌ಎಂಸಿ ಯಾರ್ಡ್, ಸೋಲದೇವನಹಳ್ಳಿ, ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ವಿದ್ಯಾರಣ್ಯಪುರ, ಸಿದ್ದಾಪುರ, ಮೈಕೋ ಲೇಔಟ್, ಆಡುಗೋಡಿ ಹಾಗೂ ಚನ್ನಪಟ್ಟಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಮ್ಶೀದ್ ಖಾನ್ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ.
ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಸಂಚು, ದರೋಡೆ, ದೊಂಬಿ, ಹಲ್ಲೆ, ಶಸ್ತ್ರಾಸ್ತ್ರ ಇಟ್ಟುಕೊಂಡು ಸಾರ್ವಜನಿಕರಿಗೆ ಬೆದರಿಕೆ, ಗಾಂಜಾ ಮಾರಾಟ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
2009ರಿಂದ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜಮ್ಶೀದ್ ಖಾನ್ ವಿರುದ್ಧ 2009ರಿಂದ 2026ರ ಜನವರಿವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿವೆ.
2026ರಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿ, ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪವೂ ಇದೆ.
ಜಮ್ಶೀದ್ ಖಾನ್‌ನ ನಿರಂತರ ರೌಡಿ ಹಾಗೂ ಅಪರಾಧ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಯಶವಂತಪುರ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಶಿಫಾರಸು ಮಾಡಿದ್ದರು.
ಪೊಲೀಸ್ ಅಧಿಕಾರಿಗಳ ವರದಿಯನ್ನು ಪರಿಶೀಲಿಸಿದ ಬಳಿಕ, ಉಚ್ಚ ನ್ಯಾಯಾಲಯದ ಸಲಹಾ ಮಂಡಳಿ ಹಾಗೂ ಕರ್ನಾಟಕ ಸರ್ಕಾರವು ಜಮ್ಶೀದ್ ಖಾನ್‌ನನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲು ಆದೇಶಿಸಿದೆ.
ಬಾಸ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿ, ಉದ್ಯೋಗಿಯೊಬ್ಬರಿಂದ ಬರೋಬ್ಬರಿ ₹1 ಕೋಟಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಪ್ರಕರಣವನ್ನು ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖನೌ ಮೂಲದ 37 ವರ್ಷದ ದೀಪಕ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ನಕಲಿ ವಾಟ್ಸಾಪ್ ಪ್ರೊಫೈಲ್ ಮೂಲಕ ಬಾಸ್‌ನಂತೆ ಸೋಗು ಹಾಕಿ, ಹಣ ವರ್ಗಾವಣೆ ಮಾಡುವಂತೆ ಸೂಚಿಸಿ ವಂಚನೆ ಮಾಡಲಾಗಿತ್ತು.ಪ್ರಕರಣ ದಾಖಲಾದ ಬೆನ್ನಲ್ಲೇ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಹಣದ ವರ್ಗಾವಣೆಯ ಜಾಡು ಪತ್ತೆಹಚ್ಚಿದ್ದಾರೆ.
ಆರೋಪಿಯನ್ನು ಆಗಸ್ಟ್ 8ರಂದು ಲಖನೌನಲ್ಲಿ ಬಂಧಿಸಿ, ಟ್ರಾನ್ಸಿಟ್ ರಿಮ್ಯಾಂಡ್ ಪಡೆದು ಸೈಬರಾಬಾದ್‌ಗೆ ಕರೆತರಲಾಗಿದೆ.ತನಿಖೆಯ ವೇಳೆ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನ ಮಾಹಿತಿಯನ್ನು ವಿಶ್ಲೇಷಿಸಿದಾಗ, ಆರೋಪಿಗೆ ಇತರೆ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ಕ್ರೈಂ ಪ್ರಕರಣಗಳೊಂದಿಗೂ ಸಂಪರ್ಕವಿರುವುದು ಪತ್ತೆಯಾಗಿದೆ.
ಇದೇ ವೇಳೆ ಪೊಲೀಸರ ತ್ವರಿತ ಕ್ರಮ ಹಾಗೂ ನ್ಯಾಯಾಲಯದ ಸಮಯೋಚಿತ ಮಧ್ಯಸ್ಥಿಕೆಯಿಂದ ವಂಚನೆಗೊಳಗಾದ ಸಂಪೂರ್ಣ ₹1 ಕೋಟಿ ಹಣವನ್ನು ಸುರಕ್ಷಿತವಾಗಿ ಪಡೆದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆಗಸ್ಟ್ 14ರಂದು ಸಂತ್ರಸ್ತರಿಗೆ ವಾಪಸ್ ನೀಡಲಾಗಿದೆ.ಹಣವನ್ನು ಸುರಕ್ಷಿತವಾಗಿ ಪಡೆದು ಕೇವಲ 10 ದಿನಗಳೊಳಗೆ ಸಂತ್ರಸ್ತರಿಗೆ ಮರಳಿಸುವಲ್ಲಿ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಎ. ಮನ್ಮೋಹನ್, ಎಸ್‌ಐ ಶ್ರೀನಿವಾಸುಲು ಹಾಗೂ ತಂಡ ಪ್ರಮುಖ ಪಾತ್ರ ವಹಿಸಿದ್ದಾರೆ.ಸೈಬರ್ ಕ್ರೈಂ ಡಿಸಿಪಿ ಕೆ. ಪುಷ್ಪಾ ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಎಸಿಪಿ ಎ. ರವೀಂದರ್ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದೆ.
ಹಣವನ್ನು ಸುರಕ್ಷಿತವಾಗಿ ಪಡೆದು ವಾಪಸ್ ನೀಡುವಲ್ಲಿ ಸಹಕರಿಸಿದ ರಂಗಾರೆಡ್ಡಿಯ ಮಾನ್ಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಕುಕಟ್‌ಪಲ್ಲಿಯ ಮಾನ್ಯ ಪ್ರಥಮ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಒಂಬತ್ತನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಸಮಯೋಚಿತ ಮಧ್ಯಸ್ಥಿಕೆಯನ್ನು ಪೊಲೀಸರು ಶ್ಲಾಘಿಸಿದ್ದಾರೆ.
ಸೈಬರಾಬಾದ್ ಪೊಲೀಸ್ ಆಯುಕ್ತ ಡಾ. ಎಂ. ರಮೇಶ್, ಐಪಿಎಸ್ ಅವರು ಸೈಬರ್ ಕ್ರೈಂ ಪೊಲೀಸರ ತ್ವರಿತ ಹಾಗೂ ಸಮನ್ವಯದ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ.
ಪೊಲೀಸರ ಎಚ್ಚರಿಕೆ: ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡುವಂತೆ ಯಾರೇ ಸೂಚಿಸಿದರೂ, ವಾಟ್ಸಾಪ್ ಪ್ರೊಫೈಲ್ ಫೋಟೋ ಅಥವಾ ಹೆಸರನ್ನು ಮಾತ್ರ ನಂಬದೆ, ಪರ್ಯಾಯ ಸಂವಹನ ಮಾರ್ಗದ ಮೂಲಕ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಬೇಕು.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ 1930ಕ್ಕೆ ಕರೆ ಮಾಡಿ ಅಥವಾ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮೂಲಕ ದೂರು ದಾಖಲಿಸಬೇಕು.
ಕಳೆದುಹೋದ ಮೊಬೈಲ್‌ಗಳು ಮತ್ತೆ ಸಿಗುವುದಿಲ್ಲ ಎಂದುಕೊಂಡಿದ್ದ ಸಾರ್ವಜನಿಕರಿಗೆ ಶಿಕಾರಿಪುರ ಟೌನ್ ಪೊಲೀಸರು ಗುಡ್‌ನ್ಯೂಸ್ ನೀಡಿದ್ದಾರೆ.
ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರು CEIR ಪೋರ್ಟಲ್‌ನಲ್ಲಿ ತಮ್ಮ ಮೊಬೈಲ್‌ಗಳನ್ನು ಬ್ಲಾಕ್ ಮಾಡಿ, ರಿಪೋರ್ಟ್ ಮಾಡಿದ್ದರು.
ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ, ತಂತ್ರಜ್ಞಾನದ ನೆರವಿನಿಂದ ಒಂದೊಂದೇ ಮೊಬೈಲ್‌ಗಳ ಜಾಡು ಪತ್ತೆಹಚ್ಚಿದ್ದಾರೆ.ಹೀಗೆ ಕಾರ್ಯಾಚರಣೆ ನಡೆಸಿ ಒಟ್ಟು 10 ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದಾರೆ.
ಪತ್ತೆಯಾದ ಮೊಬೈಲ್‌ಗಳನ್ನು ಪರಿಶೀಲನೆ ನಡೆಸಿದ ಬಳಿಕ, ಅವುಗಳ ವಾರಸುದಾರರನ್ನು ಠಾಣೆಗೆ ಕರೆಸಿ, ಮಾಲೀಕರಿಗೆ ಮರಳಿ ಹಸ್ತಾಂತರಿಸಲಾಗಿದೆ.
ತಮ್ಮ ಕಳೆದುಹೋದ ಮೊಬೈಲ್‌ಗಳು ವಾಪಸ್ ಸಿಕ್ಕಿದ್ದಕ್ಕೆ ಸಾರ್ವಜನಿಕರು ಶಿಕಾರಿಪುರ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ತಂತ್ರಜ್ಞಾನಕ್ಕೆ ಪೊಲೀಸ್ ತನಿಖೆಯ ಬಲ ಸೇರಿದರೆ, ಕಳೆದುಹೋದ ವಸ್ತುಗಳನ್ನೂ ಪತ್ತೆಹಚ್ಚಬಹುದು ಎಂಬುದಕ್ಕೆ ಶಿಕಾರಿಪುರ ಪೊಲೀಸರ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ.
ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಸಮತೋಲನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗೆ ಸೇರಿದ 11 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನಾ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಶೋಧನಾ ಕಾರ್ಯಾಚರಣೆ ವೇಳೆ ಅಧಿಕಾರಿಗೆ ಸೇರಿದ 2 ವಾಸದ ಮನೆಗಳು ಹಾಗೂ 100 ಎಕರೆ 5 ಗುಂಟೆ ಕೃಷಿ ಜಮೀನು ಸೇರಿದಂತೆ ಒಟ್ಟು ₹14 ಕೋಟಿ 28 ಲಕ್ಷದ 57 ಸಾವಿರ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ.
ಇನ್ನು ಚರ ಆಸ್ತಿಗಳ ಪೈಕಿ ₹2 ಕೋಟಿ 53 ಲಕ್ಷ ನಗದು, ಸುಮಾರು ₹3 ಲಕ್ಷ 10 ಸಾವಿರ ಮೌಲ್ಯದ ಚಿನ್ನಾಭರಣ, ₹15 ಲಕ್ಷ ಮೌಲ್ಯದ ವಾಹನಗಳು, ₹1 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸುಮಾರು ₹33 ಲಕ್ಷ 40 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಒಟ್ಟಾರೆ ಶೋಧನಾ ಕಾರ್ಯಾಚರಣೆಯಲ್ಲಿ ಸುಮಾರು ₹4 ಕೋಟಿ 4 ಲಕ್ಷದ 50 ಸಾವಿರ ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿತ ಸರ್ಕಾರಿ ಅಧಿಕಾರಿಗೆ ಸೇರಿದ ₹12 ಕೋಟಿ 95 ಲಕ್ಷದ 27 ಸಾವಿರದ 535 ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಆದಾಯದ ಮೂಲಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ಅವರು ಉತ್ತನಹಳ್ಳಿ ಸಮೀಪದ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿನ ಭದ್ರತಾ ವ್ಯವಸ್ಥೆ, ಸಿದ್ಧತೆಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸಂಚಾರ ವ್ಯವಸ್ಥೆ, ವಾಹನಗಳ ಪಾರ್ಕಿಂಗ್, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ಹಾಗೂ ಸ್ಥಳದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಯುವ ದಸರಾ ಕಾರ್ಯಕ್ರಮವು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಸುಗಮವಾಗಿ ನಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯುವ ದಸರಾ ಯಶಸ್ವಿ ಹಾಗೂ ಸುರಕ್ಷಿತವಾಗಿ ನಡೆಯಲು ಮೈಸೂರು ಜಿಲ್ಲಾ ಪೊಲೀಸರಿಂದ ಭದ್ರತಾ ಸಿದ್ಧತೆ ಚುರುಕು.
ಅಫಜಲಪೂರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೇವಲಗಾಣಗಾಪುರ ಹಾಗೂ ಚೌಡಾಪುರ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಗಾಣಗಾಪುರ ಪೊಲೀಸರು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಭಾರಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಗುಂಡಿಗಳಿಂದ ಅಪಘಾತ ಸಂಭವಿಸುವ ಆತಂಕವೂ ಎದುರಾಗಿತ್ತು.
ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ದೇವಲಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ, ಸಂಬಂಧಪಟ್ಟ ಇಲಾಖೆಯ ಕ್ರಮಕ್ಕಾಗಿ ಕಾಯದೆ ಸ್ವತಃ ರಸ್ತೆಗೆ ಇಳಿದು ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ಡಾಂಬರು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಬಳಸಿ, ಶ್ರಮದಾನದ ಮೂಲಕ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು, ಐಪಿಎಸ್ ಅವರು ಕೂಡ ಗಾಣಗಾಪುರ ಪೊಲೀಸರ ಈ ಮಾದರಿ ಸೇವಾ ಮನೋಭಾವವನ್ನು ಪ್ರಶಂಸಿಸಿದ್ದಾರೆ.
ಕರ್ತವ್ಯದ ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಿ ರಸ್ತೆ ಗುಂಡಿ ಮುಚ್ಚಿದ ಗಾಣಗಾಪುರ ಪೊಲೀಸರ ಕಾರ್ಯ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮುನಿರಾಬಾದ್ ಐಆರ್‌ಬಿ ಘಟಕದಲ್ಲಿ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್ ಹಾಗೂ ಐಆರ್‌ಬಿ ಮುನಿರಾಬಾದ್ ಕಮಾಂಡೆಂಟ್ ಕೆ.ಬಿ. ದೊರಮಣಿ ಭೀಮಯ್ಯ, ಕೆಎಸ್‌ಪಿಎಸ್ ಅವರು ಐಆರ್‌ಬಿ ಮೈದಾನವನ್ನು ಪರಿಶೀಲಿಸಿದರು.
ದೈಹಿಕ ಪರೀಕ್ಷೆ ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಮೈದಾನದಲ್ಲಿನ ವ್ಯವಸ್ಥೆಗಳು, ಪರೀಕ್ಷಾ ಸ್ಥಳ ಹಾಗೂ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.
ಬಳಿಕ ನೇಮಕಾತಿ ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಅಭ್ಯರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಹಾಗೂ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಯಿತು.
ನೇಮಕಾತಿ ದೈಹಿಕ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
Fame India-Asia Post ಆಯೋಜಿಸಿದ “100 Best Police Chiefs of India” ಪಟ್ಟಿಯಲ್ಲಿ ಸ್ಥಾನ ಪಡೆದ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಮಲ್ಲಿಕ್ ಸಿ. ಅವರು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಪೊಲೀಸ್ ಇಲಾಖೆಯಲ್ಲಿ ಪರಿಣಾಮಕಾರಿ ಆಡಳಿತ, ಉತ್ತಮ ಕಾರ್ಯನಿರ್ವಹಣೆ ಹಾಗೂ ಜನಸ್ನೇಹಿ ಪೊಲೀಸ್ ಸೇವೆಗೆ ದೊರೆತ ಈ ಗೌರವಕ್ಕೆ ಜಿಲ್ಲಾ ಪೊಲೀಸ್ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.