ಅಫಜಲಪೂರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೇವಲಗಾಣಗಾಪುರ ಹಾಗೂ ಚೌಡಾಪುರ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಗಾಣಗಾಪುರ ಪೊಲೀಸರು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.

ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಭಾರಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಗುಂಡಿಗಳಿಂದ ಅಪಘಾತ ಸಂಭವಿಸುವ ಆತಂಕವೂ ಎದುರಾಗಿತ್ತು.
ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ದೇವಲಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ, ಸಂಬಂಧಪಟ್ಟ ಇಲಾಖೆಯ ಕ್ರಮಕ್ಕಾಗಿ ಕಾಯದೆ ಸ್ವತಃ ರಸ್ತೆಗೆ ಇಳಿದು ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ಡಾಂಬರು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಬಳಸಿ, ಶ್ರಮದಾನದ ಮೂಲಕ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು, ಐಪಿಎಸ್ ಅವರು ಕೂಡ ಗಾಣಗಾಪುರ ಪೊಲೀಸರ ಈ ಮಾದರಿ ಸೇವಾ ಮನೋಭಾವವನ್ನು ಪ್ರಶಂಸಿಸಿದ್ದಾರೆ.
ಕರ್ತವ್ಯದ ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಿ ರಸ್ತೆ ಗುಂಡಿ ಮುಚ್ಚಿದ ಗಾಣಗಾಪುರ ಪೊಲೀಸರ ಕಾರ್ಯ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


