ಆದಾಯಕ್ಕಿಂತ ಅಧಿಕ ಆಸ್ತಿ ಶಂಕೆ: 11 ಕಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಸಮತೋಲನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗೆ ಸೇರಿದ 11 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನಾ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಶೋಧನಾ ಕಾರ್ಯಾಚರಣೆ ವೇಳೆ ಅಧಿಕಾರಿಗೆ ಸೇರಿದ 2 ವಾಸದ ಮನೆಗಳು ಹಾಗೂ 100 ಎಕರೆ 5 ಗುಂಟೆ ಕೃಷಿ ಜಮೀನು ಸೇರಿದಂತೆ ಒಟ್ಟು ₹14 ಕೋಟಿ 28 ಲಕ್ಷದ 57 ಸಾವಿರ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ.

ಇನ್ನು ಚರ ಆಸ್ತಿಗಳ ಪೈಕಿ ₹2 ಕೋಟಿ 53 ಲಕ್ಷ ನಗದು, ಸುಮಾರು ₹3 ಲಕ್ಷ 10 ಸಾವಿರ ಮೌಲ್ಯದ ಚಿನ್ನಾಭರಣ, ₹15 ಲಕ್ಷ ಮೌಲ್ಯದ ವಾಹನಗಳು, ₹1 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸುಮಾರು ₹33 ಲಕ್ಷ 40 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಒಟ್ಟಾರೆ ಶೋಧನಾ ಕಾರ್ಯಾಚರಣೆಯಲ್ಲಿ ಸುಮಾರು ₹4 ಕೋಟಿ 4 ಲಕ್ಷದ 50 ಸಾವಿರ ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿತ ಸರ್ಕಾರಿ ಅಧಿಕಾರಿಗೆ ಸೇರಿದ ₹12 ಕೋಟಿ 95 ಲಕ್ಷದ 27 ಸಾವಿರದ 535 ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಆದಾಯದ ಮೂಲಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

Related Articles

TRENDING ARTICLES