ಯಶವಂತಪುರದ ರೌಡಿ ಜಮ್ಶೀದ್ ಖಾನ್ ಗೂಂಡಾ ಕಾಯ್ದೆಯಡಿ ಬಂಧನ

ಯಶವಂತಪುರ ಪೊಲೀಸ್ ಠಾಣೆಯ ರೌಡಿ ವ್ಯಕ್ತಿ ಜಮ್ಶೀದ್ ಖಾನ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಯಶವಂತಪುರ ಸೇರಿದಂತೆ ಆರ್‌ಎಂಸಿ ಯಾರ್ಡ್, ಸೋಲದೇವನಹಳ್ಳಿ, ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ವಿದ್ಯಾರಣ್ಯಪುರ, ಸಿದ್ದಾಪುರ, ಮೈಕೋ ಲೇಔಟ್, ಆಡುಗೋಡಿ ಹಾಗೂ ಚನ್ನಪಟ್ಟಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಮ್ಶೀದ್ ಖಾನ್ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ.

ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಸಂಚು, ದರೋಡೆ, ದೊಂಬಿ, ಹಲ್ಲೆ, ಶಸ್ತ್ರಾಸ್ತ್ರ ಇಟ್ಟುಕೊಂಡು ಸಾರ್ವಜನಿಕರಿಗೆ ಬೆದರಿಕೆ, ಗಾಂಜಾ ಮಾರಾಟ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

2009ರಿಂದ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜಮ್ಶೀದ್ ಖಾನ್ ವಿರುದ್ಧ 2009ರಿಂದ 2026ರ ಜನವರಿವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿವೆ.

2026ರಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿ, ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪವೂ ಇದೆ.

ಜಮ್ಶೀದ್ ಖಾನ್‌ನ ನಿರಂತರ ರೌಡಿ ಹಾಗೂ ಅಪರಾಧ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಯಶವಂತಪುರ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಶಿಫಾರಸು ಮಾಡಿದ್ದರು.

ಪೊಲೀಸ್ ಅಧಿಕಾರಿಗಳ ವರದಿಯನ್ನು ಪರಿಶೀಲಿಸಿದ ಬಳಿಕ, ಉಚ್ಚ ನ್ಯಾಯಾಲಯದ ಸಲಹಾ ಮಂಡಳಿ ಹಾಗೂ ಕರ್ನಾಟಕ ಸರ್ಕಾರವು ಜಮ್ಶೀದ್ ಖಾನ್‌ನನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲು ಆದೇಶಿಸಿದೆ.

Related Articles

TRENDING ARTICLES