ದಾವಣಗೆರೆ ಪೂರ್ವ ವಲಯದ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ನಡೆದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಇಂದು ತೆರೆ ಬಿದ್ದಿದೆ. ದಿನಾಂಕ 28 ಮತ್ತು 29ನೇ ಆಗಸ್ಟ್ 2026ರಂದು ಆಯೋಜಿಸಿದ್ದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ವಿವಿಧ ಪೊಲೀಸ್ ಕರ್ತವ್ಯ ಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಪೂರ್ವ ವಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೆಚ್ಚಿನ ಅಂಕಗಳನ್ನು ಗಳಿಸಿದ ದಾವಣಗೆರೆ ಜಿಲ್ಲಾ ಪೊಲೀಸ್ ತಂಡವು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಇದೇ ವೇಳೆ ಶ್ವಾನದಳದ ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ದಾವಣಗೆರೆ ಜಿಲ್ಲಾ ಪೊಲೀಸ್ ಶ್ವಾನದಳದ ‘ಧೃತಿ’ ಶ್ವಾನವು ಪೂರ್ವ ವಲಯ ಮಟ್ಟದ ಬೆಸ್ಟ್ ಡಾಗ್ ಪ್ರಶಸ್ತಿಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಪೂರ್ವ ವಲಯದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ರುದ್ರೇಶ್, ಆರ್‌ಎಫ್‌ಎಸ್‌ಎಲ್ ಉಪ ನಿರ್ದೇಶಕ ಡಾ. ಛಾಯಕುಮಾರಿ ಸೇರಿದಂತೆ ಪೂರ್ವ ವಲಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ಅವರಿಂದ ₹10 ಲಕ್ಷ ನಗದು ಹಾಗೂ ಸುಮಾರು 110 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನ ಪ್ರಕರಣಗಳ ತನಿಖೆ ಕೈಗೊಂಡ ಕೌಲ್ ಬಜಾರ್ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕಳ್ಳತನಕ್ಕೆ ಸಂಬಂಧಿಸಿದ ₹10.00 ಲಕ್ಷ ನಗದು ಮತ್ತು ಸುಮಾರು 110 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಕೌಲ್ ಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಧಿತ ಆರೋಪಿಗಳಿಂದ ಮತ್ತಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ತಡರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ದಿನಾಂಕ 27-08-2026ರಂದು ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ, ರೌಡಿ ಆಸಾಮಿಗಳ ಮನೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಒಟ್ಟು 121 ರೌಡಿ ಆಸಾಮಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಪ್ರಸ್ತುತ ಅವರು ಯಾವ ಕೆಲಸ ಮಾಡುತ್ತಿದ್ದಾರೆ, ಅವರ ಚಟುವಟಿಕೆಗಳೇನು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಇದರ ಜೊತೆಗೆ ರೌಡಿ ಆಸಾಮಿಗಳ ವಿರುದ್ಧ ಈ ಹಿಂದೆ ದಾಖಲಾಗಿರುವ ಪ್ರಕರಣಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆಯೇ, ವಿಚಾರಣೆಗೆ ಗೈರುಹಾಜರಾಗಿ ವಾರೆಂಟ್, ಪ್ರೋಕ್ಲಮೇಷನ್ ಅಥವಾ ಎಲ್.ಪಿ.ಆರ್ ಆಗಿರುವ ಪ್ರಕರಣಗಳಿವೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗಿದೆ. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ರೌಡಿ ಆಸಾಮಿಗಳಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿ ಆಸಾಮಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಚಲನವಲನಗಳ ಮೇಲೆ ನಿರಂತರ ನಿಗಾ ಇಡುವುದಾಗಿ ಪೊಲೀಸರು ಸೂಚಿಸಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಡಿಸಿಪಿ ಬಿ.ಎಸ್. ನೇಮಗೌಡ, ಐಪಿಎಸ್ ನೇತೃತ್ವದಲ್ಲಿ ಮೂರು ಉಪವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರು, ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ರೌಡಿ ನಿಗ್ರಹ ಪಡೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಒಂದೇ ರಾತ್ರಿ 121 ರೌಡಿ ಆಸಾಮಿಗಳ ಮನೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಉತ್ತರ ವಿಭಾಗದ ಪೊಲೀಸರ ಈ ಕಾರ್ಯಾಚರಣೆ, ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಇದರ ಭಾಗವಾಗಿ ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಮುಂಜಾನೆ ಏಕಕಾಲದಲ್ಲಿ ರೌಡಿ ಆಸಾಮಿಗಳ ಮನೆಗಳಿಗೆ ತೆರಳಿದ ಪೊಲೀಸರು, ಮನೆಗಳ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ರೌಡಿ ಆಸಾಮಿಗಳ ಚಟುವಟಿಕೆಗಳು, ಅವರ ಬಳಿ ಇರುವ ವಸ್ತುಗಳು ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಅಥವಾ ವಸ್ತುಗಳಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಪೊಲೀಸರ ದಿಢೀರ್ ದಾಳಿಯಿಂದ ರೌಡಿ ಆಸಾಮಿಗಳಲ್ಲಿ ಆತಂಕ ಮೂಡಿದ್ದು, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಪೊಲೀಸರು ನೀಡಿದ್ದಾರೆ.
ರೌಡಿ ಆಸಾಮಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರುವ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಒಟ್ಟಿನಲ್ಲಿ, ಬೆಂಗಳೂರು ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದ್ದು, ಬಾಗಲಗುಂಟೆ ವ್ಯಾಪ್ತಿಯಲ್ಲಿ ನಡೆದ ಮನೆಗಳ ಪರಿಶೀಲನೆ ರೌಡಿಗಳಿಗೆ ಶಾಕ್ ನೀಡಿದೆ.
ಮಧ್ಯಪ್ರದೇಶದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಕೆ.ಬಿ. ರವಿ ಮೃತಪಟ್ಟಿರುವ ಘಟನೆ ಪೊಲೀಸ್ ಇಲಾಖೆಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸೈಬರ್ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಆರೋಪಿಗಳ ಬೆನ್ನತ್ತಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಬಿ. ರವಿ ಸೇರಿದಂತೆ ಪೊಲೀಸ್ ತಂಡ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಬೆಂಗಳೂರು ಪೊಲೀಸರ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು. ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಬಳಿಕ ತಂಡದ ಕೆಲ ಸಿಬ್ಬಂದಿ ಬೆಂಗಳೂರಿಗೆ ವಾಪಸ್ ಆಗಿದ್ದರೆ, ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಇನ್ಸ್‌ಪೆಕ್ಟರ್ ರವಿ ಸೇರಿದಂತೆ ಕೆಲ ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದು ತನಿಖೆ ಮುಂದುವರಿಸಿದ್ದರು. ಕಾರ್ಯಾಚರಣೆ ಪೂರ್ಣಗೊಳಿಸಿ ವಾಪಸ್ ಬರುತ್ತಿದ್ದ ವೇಳೆ ಅವರು ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯೋರಾ ಸಮೀಪದ ಭೋಪಾಲ್ ಬೈಪಾಸ್‌ನಲ್ಲಿ ಬಸ್ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮೇಲಿನ ಸ್ಲೀಪರ್ ವಿಭಾಗದಲ್ಲಿದ್ದ ಕೆಲ ಪ್ರಯಾಣಿಕರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಸುಮಾರು 30 ಅಡಿ ಕೆಳಗೆ ಬಿದ್ದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಪಘಾತದ ವೇಳೆ ಇನ್ಸ್‌ಪೆಕ್ಟರ್ ಕೆ.ಬಿ. ರವಿ ಅವರು ಬಸ್‌ನ ಮೇಲಿನ ಬರ್ತ್‌ನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಅವರು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇನ್ಸ್‌ಪೆಕ್ಟರ್ ಕೆ.ಬಿ. ರವಿ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಯಲ್ಲಿ ಬಸ್ ಚಾಲಕ ವಿಕಾಸ್ ಶುಕ್ಲಾ ಸೇರಿದಂತೆ ಇತರ ಪ್ರಯಾಣಿಕರೂ ಮೃತಪಟ್ಟಿದ್ದಾರೆ. ಪೊಲೀಸ್ ತಂಡದ ಕೆಲ ಸಿಬ್ಬಂದಿಗೂ ಗಾಯಗಳಾಗಿದ್ದು, ಒಬ್ಬ ಎಎಸ್‌ಐ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಕೆ.ಬಿ. ರವಿ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು. 2005ರಲ್ಲಿ ಕಾನ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು, 2007ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಬಳಿಕ ಬೆಂಗಳೂರಿನ ಅಶೋಕನಗರ, ಇಂದಿರಾನಗರ, ಕೋರಮಂಗಲ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಸೈಬರ್ ಕ್ರೈಂ ತನಿಖಾ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೈಬರ್ ಅಪರಾಧಿಗಳ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ರವಿ, ಕರ್ತವ್ಯ ನಿರ್ವಹಿಸುವಾಗಲೇ ದುರಂತಕ್ಕೆ ಬಲಿಯಾಗಿರುವುದು ಸಹೋದ್ಯೋಗಿಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ದುಃಖದ ವಾತಾವರಣ ಮೂಡಿಸಿದೆ.
ಸೈಬರ್ ಖದೀಮರ ಬೆನ್ನತ್ತಿ ಆರೋಪಿಗಳ ಪತ್ತೆಗಾಗಿ ದೂರದ ಮಧ್ಯಪ್ರದೇಶಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿ, ಕರ್ತವ್ಯ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ. ಅಪರಾಧಿಗಳ ಬೆನ್ನತ್ತಿ ಸಾರ್ವಜನಿಕರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಇನ್ಸ್‌ಪೆಕ್ಟರ್ ಕೆ.ಬಿ. ರವಿ ಅವರ ಅಕಾಲಿಕ ನಿಧನ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅಪಘಾತದ ನಿಖರ ಕಾರಣದ ಕುರಿತು ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಕ್ಷಾಬಂಧನ್… ಸಹೋದರತ್ವ, ಆತ್ಮೀಯತೆ ಮತ್ತು ರಕ್ಷಣೆಯ ಭರವಸೆಯ ಸಂಕೇತ…ಇದೇ ಸ್ಫೂರ್ತಿಯೊಂದಿಗೆ ಯಾದಗಿರಿಯ ಮಲ್ಕಾಜಿಗಿರಿ ಪೊಲೀಸರು, ‘ಮೀ ಸುರಕ್ಷಾ – ಸಹಚರಿ’ ಕಾರ್ಯಕ್ರಮದ ಅಂಗವಾಗಿ ಸಹಚರಿಯರೊಂದಿಗೆ ಆತ್ಮೀಯವಾಗಿ ರಕ್ಷಾಬಂಧನ್ ಆಚರಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಸಹಚರಿಯರಿಗೆ ರಾಖಿ ಕಟ್ಟಿ, ಉಡುಗೊರೆ ಹಾಗೂ ಸಿಹಿತಿಂಡಿಗಳನ್ನು ವಿತರಿಸಿ, ಅವರೊಂದಿಗೆ ಸಂತಸ ಹಂಚಿಕೊಂಡರು.
ಸಮವಸ್ತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೂ, ಸಮಾಜದ ಮಹಿಳೆಯರಿಗೂ ನಡುವಿನ ಬಾಂಧವ್ಯಕ್ಕೆ ಈ ಕಾರ್ಯಕ್ರಮ ಹೊಸ ಅರ್ಥ ನೀಡಿತು.ರಾಖಿಯ ಮೂಲಕ ಸಹೋದರತ್ವ, ಪರಸ್ಪರ ಗೌರವ, ಆತ್ಮೀಯತೆ ಮತ್ತು ಭರವಸೆಯ ಸಂದೇಶ ಸಾರಲಾಯಿತು.
ಜನರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯುವ ಮೂಲಕ ಪೊಲೀಸ್ ಇಲಾಖೆ ಮತ್ತು ಸಮುದಾಯದ ನಡುವಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಇದಾಗಿತ್ತು.
ಸಮುದಾಯದ ಸುರಕ್ಷತೆ ಕೇವಲ ಪೊಲೀಸರ ಜವಾಬ್ದಾರಿಯಲ್ಲ… ಪೊಲೀಸ್ ಮತ್ತು ಸಾರ್ವಜನಿಕರ ಸಹಭಾಗಿತ್ವದಿಂದಲೇ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.
ರಕ್ಷಾಬಂಧನ್ ಹಬ್ಬದ ಸ್ಫೂರ್ತಿಯಲ್ಲಿ ನಡೆದ ಈ ವಿಶೇಷ ಆಚರಣೆಯಲ್ಲಿ ಮಲ್ಕಾಜಿಗಿರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ, ಸಹಚರಿಯರೊಂದಿಗೆ ಸಂತಸ ಹಂಚಿಕೊಂಡರು.
ಕೊಡಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಮೂವರು ಪೊಲೀಸ್ ಉಪಾಧೀಕ್ಷಕರು ಹಾಗೂ ಮೂವರು ಪೊಲೀಸ್ ನಿರೀಕ್ಷಕರುಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಕರ್ತವ್ಯದಲ್ಲಿ ತೋರಿದ ಬದ್ಧತೆ, ಜವಾಬ್ದಾರಿ ಹಾಗೂ ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಧಿಕಾರಿಗಳ ಶ್ರಮ ಮತ್ತು ಬದ್ಧತೆಗೆ ಈ ಗೌರವ ಮತ್ತಷ್ಟು ಉತ್ತೇಜನ ನೀಡುವಂತಾಯಿತು.
ಜನರ ಸುರಕ್ಷತೆ ಹಾಗೂ ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯನಿಷ್ಠೆಗೆ ಈ ಅಭಿನಂದನೆ ಸಾಕ್ಷಿಯಾಯಿತು.
ರಕ್ಷಾಬಂಧನ… ಕೇವಲ ಕೈಗೆ ರಾಖಿ ಕಟ್ಟುವ ಹಬ್ಬವಲ್ಲ… ಸಹೋದರ-ಸಹೋದರಿಯ ನಡುವಿನ ಪ್ರೀತಿ, ಕಾಳಜಿ ಮತ್ತು ರಕ್ಷಣೆಯ ಪ್ರತಿಜ್ಞೆಯ ಸಂಕೇತ…
ಆದರೆ, ಹಬ್ಬದ ದಿನವೂ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಪೊಲೀಸರೊಂದಿಗೆ ಈ ಬಾಂಧವ್ಯವನ್ನು ಹಂಚಿಕೊಂಡರೆ ಹೇಗಿರುತ್ತದೆ..?ಇಂತಹದ್ದೊಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು ಕುಮಟಾ ಪೊಲೀಸ್ ಠಾಣೆ…
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕುಮಟಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ರಕ್ಷಾಬಂಧನದ ಅಂಗವಾಗಿ ರಾಖಿ ಕಟ್ಟಲಾಯಿತು. ಪೊಲೀಸ್ ಸಿಬ್ಬಂದಿಯ ಕೈಗೆ ರಾಖಿ ಕಟ್ಟಿದ ಮಹಿಳೆಯರು, ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು.
ರಕ್ಷಾಬಂಧನದ ದಿನವೂ ಕರ್ತವ್ಯದಲ್ಲಿದ್ದ ಪೊಲೀಸರು, ಕುಟುಂಬದಿಂದ ದೂರವಾಗಿ ಸಮವಸ್ತ್ರದಲ್ಲೇ ದಿನ ಕಳೆಯಬೇಕಾದ ಅನಿವಾರ್ಯತೆ ಇತ್ತು. ಇಂತಹ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಕೈಗೆ ರಾಖಿ ಕಟ್ಟಿದ ಮಹಿಳಾ ಮೋರ್ಚಾ ಸದಸ್ಯರು, ಅವರ ಕರ್ತವ್ಯಕ್ಕೆ ಗೌರವ ಸಲ್ಲಿಸಿದರು.
ಸಾಮಾನ್ಯವಾಗಿ ಪೊಲೀಸರನ್ನು ನಾವು ಕಠಿಣ ಕರ್ತವ್ಯ ನಿರ್ವಹಿಸುವ ಸಮವಸ್ತ್ರದ ವ್ಯಕ್ತಿಗಳಾಗಿ ನೋಡುತ್ತೇವೆ. ಆದರೆ, ರಾಖಿ ಕಟ್ಟುವ ಈ ಕ್ಷಣದಲ್ಲಿ ಪೊಲೀಸ್ ಠಾಣೆಯ ವಾತಾವರಣವೇ ಭಾವುಕವಾಗಿತ್ತು.ರಾಖಿ ಕಟ್ಟುವಾಗ ಮಹಿಳೆಯರ ಕಣ್ಣಲ್ಲಿ ಗೌರವ… ರಾಖಿ ಕಟ್ಟಿಸಿಕೊಳ್ಳುವ ಪೊಲೀಸರ ಕಣ್ಣಲ್ಲಿ ಭಾವುಕತೆ…
ನೀವು ಕಟ್ಟಿದ ಈ ರಕ್ಷೆ ಕೇವಲ ದಾರವಲ್ಲ… ಇದು ನಮ್ಮ ಜವಾಬ್ದಾರಿಯನ್ನು ನೆನಪಿಸುವ ಸಂಕೇತ. ನಾಡಿನ ಪ್ರತಿಯೊಬ್ಬ ಸಹೋದರಿಯ ರಕ್ಷಣೆ ನಮ್ಮ ಕರ್ತವ್ಯ. ನಿಮ್ಮ ಈ ಪ್ರೀತಿಗೆ ನಾವು ಸದಾ ಋಣಿ… ಎಂಬ ಭಾವನೆ ಪೊಲೀಸ್ ಸಿಬ್ಬಂದಿಯಲ್ಲಿತ್ತು.ಸಮವಸ್ತ್ರದ ಹಿಂದೆ ಇರುವ ಮಾನವೀಯತೆ… ಕರ್ತವ್ಯದ ನಡುವೆ ಇರುವ ಬಾಂಧವ್ಯ… ಈ ರಕ್ಷಾಬಂಧನ ಆಚರಣೆಯ ಮೂಲಕ ಮತ್ತೊಮ್ಮೆ ಅನಾವರಣಗೊಂಡಿತು.
ಪೊಲೀಸ್ ಠಾಣೆಯಲ್ಲೇ ನಡೆದ ಈ ರಕ್ಷಾಬಂಧನ, ರಕ್ಷಣೆ ಮತ್ತು ರಕ್ಷಾಬಂಧನದ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಯಿತು.ಈ ಭಾವನಾತ್ಮಕ ಸಂದರ್ಭದಲ್ಲಿ ಕುಮಟಾ ಮಂಡಲದ ಪ್ರಭಾರಿ ಶಾರದಾ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ್, ಪ್ರಧಾನ ಕಾರ್ಯದರ್ಶಿ ಶೈಲಾ ಗೌಡ, ಗಂಗೆ ಪಟಗಾರ, ಮಂಡಲದ ಉಪಾಧ್ಯಕ್ಷೆ ಪುಷ್ಪಾ ಶೇಟ್, ಪುರಸಭೆ ಸದಸ್ಯರಾದ ಗೀತಾ ಮುಕ್ರಿ ಹಾಗೂ ಮಹಾಲಕ್ಷ್ಮಿ ಶೇಟ್ ಉಪಸ್ಥಿತರಿದ್ದರು.
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಸುಂದ್ರಪಾಳ್ಯದಲ್ಲಿ ಅಪಾಯಕಾರಿ ಆಯುಧಗಳೊಂದಿಗೆ ಸುತ್ತಾಡುತ್ತಿದ್ದ ಆರೋಪಿಯೊಬ್ಬ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.
ಇಂದು ಬೆಳಗಿನ ಜಾವ ಸುಮಾರು 12:20ಕ್ಕೆ, ಆರೋಪಿ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡು ಸೋಮಸುಂದ್ರಪಾಳ್ಯದಲ್ಲಿ ಸುತ್ತಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂಡೇಪಾಳ್ಯ ಠಾಣೆಯ ಪಿಎಸ್‌ಐ ಸಚಿನ್ ಅವರಿಗೆ ಲಭ್ಯವಾಗಿದೆ.
ತಕ್ಷಣ ಅಪರಾಧ ವಿಭಾಗದ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರೊಂದಿಗೆ ಸ್ಥಳಕ್ಕೆ ತೆರಳಿದ ಪಿಎಸ್‌ಐ, ಸುಮಾರು 12:50ಕ್ಕೆ ಸೋಮಸುಂದ್ರಪಾಳ್ಯ ಕೆರೆಯ ಪಕ್ಕದ ಖಾಲಿ ಜಾಗೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರು ಆರೋಪಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಆಯುಧದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರ ಎಡ ಕೈಗೆ ಹೊಡೆದು ಗಾಯಗೊಳಿಸಿದ್ದಾನೆ.
ಬಳಿಕ ಪಿಎಸ್‌ಐ ಸಚಿನ್ ಅವರ ಮೇಲೂ ಆಯುಧದಿಂದ ಹಲ್ಲೆ ಮಾಡಲು ಆರೋಪಿ ಮುಂದಾಗಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ಹಲ್ಲೆಗೆ ಮುಂದುವರಿದಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸಚಿನ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಹಾಗೂ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರನ್ನು ಚಿಕಿತ್ಸೆಗಾಗಿ ಜಯನಗರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಳಿಯಿದ್ದ ಆಯುಧ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೊಬೈಲ್ ಕಳೆದುಕೊಂಡು ಆತಂಕಕ್ಕೊಳಗಾಗಿದ್ದ ಸಾರ್ವಜನಿಕರಿಗೆ ಮಲ್ಕಾಜಿಗಿರಿ ಪೊಲೀಸರು ಗುಡ್‌ನ್ಯೂಸ್ ನೀಡಿದ್ದಾರೆ.CEIR ಅಂದ್ರೆ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಮೂಲಕ ತಾಂತ್ರಿಕವಾಗಿ ಶೋಧ ನಡೆಸಿ, ಕಳೆದುಹೋದ ಹಾಗೂ ಕಳ್ಳತನವಾಗಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಕಳೆದ ಏಳು ತಿಂಗಳಲ್ಲಿ ಇದೇ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಮಲ್ಕಾಜಿಗಿರಿ ಪೊಲೀಸ್ ಕಮಿಷನರೇಟ್, ಒಟ್ಟು 1,834 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.
ಪತ್ತೆಯಾದ ಮೊಬೈಲ್‌ಗಳ ಕುರಿತು ಮಾಹಿತಿ ಲಭಿಸಿದ ಸಂತ್ರಸ್ತರು, ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಸಂಪರ್ಕಿಸಬೇಕು.ಸೂಕ್ತ ದಾಖಲೆಗಳು ಹಾಗೂ ಪರಿಶೀಲನಾ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕ, ಪತ್ತೆಯಾದ ತಮ್ಮ ಮೊಬೈಲ್ ಫೋನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.
ಮೊಬೈಲ್ ಕಳೆದುಕೊಂಡವರು ಅಥವಾ ಮೊಬೈಲ್ ಕಳ್ಳತನವಾದವರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಅಲ್ಲದೇ, CEIR ಪೋರ್ಟಲ್‌ನಲ್ಲಿ ಮೊಬೈಲ್‌ನ ಅಗತ್ಯ ವಿವರಗಳನ್ನು ನೋಂದಾಯಿಸುವಂತೆ ಸೂಚಿಸಲಾಗಿದೆ.
ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಗಳ ಮೂಲಕ ಸಾರ್ವಜನಿಕರ ಬೆಲೆಬಾಳುವ ಆಸ್ತಿಯನ್ನು ಮರಳಿ ತಲುಪಿಸುವ ನಿಟ್ಟಿನಲ್ಲಿ ಮಲ್ಕಾಜಿಗಿರಿ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.