ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಬೆಂಗಳೂರಿನ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಸೇರಿ ನಾಲ್ವರು ಸಾವು

ಮಧ್ಯಪ್ರದೇಶದಲ್ಲಿ ನಡೆದ ಭೀಕರ ಬಸ್‌ ಅಪಘಾತದಲ್ಲಿ ಬೆಂಗಳೂರಿನ ಸೈಬರ್‌ ಕ್ರೈಂ ಇನ್ಸ್‌ಪೆಕ್ಟರ್‌ ಕೆ.ಬಿ. ರವಿ ಮೃತಪಟ್ಟಿರುವ ಘಟನೆ ಪೊಲೀಸ್‌ ಇಲಾಖೆಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸೈಬರ್‌ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಆರೋಪಿಗಳ ಬೆನ್ನತ್ತಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್‌ ಠಾಣೆಯ ಇನ್ಸ್‌ಪೆಕ್ಟರ್‌ ಕೆ.ಬಿ. ರವಿ ಸೇರಿದಂತೆ ಪೊಲೀಸ್‌ ತಂಡ ವಾಪಸ್‌ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸೈಬರ್‌ ಅಪರಾಧ ಪ್ರಕರಣದ ತನಿಖೆಗಾಗಿ ಬೆಂಗಳೂರು ಪೊಲೀಸರ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು. ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಬಳಿಕ ತಂಡದ ಕೆಲ ಸಿಬ್ಬಂದಿ ಬೆಂಗಳೂರಿಗೆ ವಾಪಸ್‌ ಆಗಿದ್ದರೆ, ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಇನ್ಸ್‌ಪೆಕ್ಟರ್‌ ರವಿ ಸೇರಿದಂತೆ ಕೆಲ ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದು ತನಿಖೆ ಮುಂದುವರಿಸಿದ್ದರು. ಕಾರ್ಯಾಚರಣೆ ಪೂರ್ಣಗೊಳಿಸಿ ವಾಪಸ್‌ ಬರುತ್ತಿದ್ದ ವೇಳೆ ಅವರು ಸ್ಲೀಪರ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯೋರಾ ಸಮೀಪದ ಭೋಪಾಲ್‌ ಬೈಪಾಸ್‌ನಲ್ಲಿ ಬಸ್‌ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮೇಲಿನ ಸ್ಲೀಪರ್‌ ವಿಭಾಗದಲ್ಲಿದ್ದ ಕೆಲ ಪ್ರಯಾಣಿಕರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಸುಮಾರು 30 ಅಡಿ ಕೆಳಗೆ ಬಿದ್ದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಪಘಾತದ ವೇಳೆ ಇನ್ಸ್‌ಪೆಕ್ಟರ್‌ ಕೆ.ಬಿ. ರವಿ ಅವರು ಬಸ್‌ನ ಮೇಲಿನ ಬರ್ತ್‌ನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಅವರು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇನ್ಸ್‌ಪೆಕ್ಟರ್‌ ಕೆ.ಬಿ. ರವಿ ಕೊನೆಯುಸಿರೆಳೆದಿದ್ದಾರೆ.

ಈ ದುರ್ಘಟನೆಯಲ್ಲಿ ಬಸ್‌ ಚಾಲಕ ವಿಕಾಸ್‌ ಶುಕ್ಲಾ ಸೇರಿದಂತೆ ಇತರ ಪ್ರಯಾಣಿಕರೂ ಮೃತಪಟ್ಟಿದ್ದಾರೆ. ಪೊಲೀಸ್‌ ತಂಡದ ಕೆಲ ಸಿಬ್ಬಂದಿಗೂ ಗಾಯಗಳಾಗಿದ್ದು, ಒಬ್ಬ ಎಎಸ್‌ಐ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಕೆ.ಬಿ. ರವಿ ಅವರು ಪೊಲೀಸ್‌ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು. 2005ರಲ್ಲಿ ಕಾನ್‌ಸ್ಟೇಬಲ್‌ ಆಗಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು, 2007ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಬಳಿಕ ಬೆಂಗಳೂರಿನ ಅಶೋಕನಗರ, ಇಂದಿರಾನಗರ, ಕೋರಮಂಗಲ ಸೇರಿದಂತೆ ಹಲವು ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಸೈಬರ್‌ ಕ್ರೈಂ ತನಿಖಾ ವಿಭಾಗದಲ್ಲಿ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೈಬರ್‌ ಅಪರಾಧಿಗಳ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ರವಿ, ಕರ್ತವ್ಯ ನಿರ್ವಹಿಸುವಾಗಲೇ ದುರಂತಕ್ಕೆ ಬಲಿಯಾಗಿರುವುದು ಸಹೋದ್ಯೋಗಿಗಳು ಹಾಗೂ ಪೊಲೀಸ್‌ ಇಲಾಖೆಯಲ್ಲಿ ದುಃಖದ ವಾತಾವರಣ ಮೂಡಿಸಿದೆ.

ಸೈಬರ್‌ ಖದೀಮರ ಬೆನ್ನತ್ತಿ ಆರೋಪಿಗಳ ಪತ್ತೆಗಾಗಿ ದೂರದ ಮಧ್ಯಪ್ರದೇಶಕ್ಕೆ ತೆರಳಿದ್ದ ಪೊಲೀಸ್‌ ಅಧಿಕಾರಿ, ಕರ್ತವ್ಯ ಮುಗಿಸಿ ವಾಪಸ್‌ ಬರುತ್ತಿದ್ದ ವೇಳೆ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ. ಅಪರಾಧಿಗಳ ಬೆನ್ನತ್ತಿ ಸಾರ್ವಜನಿಕರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಇನ್ಸ್‌ಪೆಕ್ಟರ್‌ ಕೆ.ಬಿ. ರವಿ ಅವರ ಅಕಾಲಿಕ ನಿಧನ ಪೊಲೀಸ್‌ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅಪಘಾತದ ನಿಖರ ಕಾರಣದ ಕುರಿತು ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

TRENDING ARTICLES