ರಕ್ಷಾಬಂಧನ… ಕೇವಲ ಕೈಗೆ ರಾಖಿ ಕಟ್ಟುವ ಹಬ್ಬವಲ್ಲ… ಸಹೋದರ-ಸಹೋದರಿಯ ನಡುವಿನ ಪ್ರೀತಿ, ಕಾಳಜಿ ಮತ್ತು ರಕ್ಷಣೆಯ ಪ್ರತಿಜ್ಞೆಯ ಸಂಕೇತ…
ಆದರೆ, ಹಬ್ಬದ ದಿನವೂ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಪೊಲೀಸರೊಂದಿಗೆ ಈ ಬಾಂಧವ್ಯವನ್ನು ಹಂಚಿಕೊಂಡರೆ ಹೇಗಿರುತ್ತದೆ..?ಇಂತಹದ್ದೊಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು ಕುಮಟಾ ಪೊಲೀಸ್ ಠಾಣೆ…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕುಮಟಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ರಕ್ಷಾಬಂಧನದ ಅಂಗವಾಗಿ ರಾಖಿ ಕಟ್ಟಲಾಯಿತು. ಪೊಲೀಸ್ ಸಿಬ್ಬಂದಿಯ ಕೈಗೆ ರಾಖಿ ಕಟ್ಟಿದ ಮಹಿಳೆಯರು, ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದರು.
ರಕ್ಷಾಬಂಧನದ ದಿನವೂ ಕರ್ತವ್ಯದಲ್ಲಿದ್ದ ಪೊಲೀಸರು, ಕುಟುಂಬದಿಂದ ದೂರವಾಗಿ ಸಮವಸ್ತ್ರದಲ್ಲೇ ದಿನ ಕಳೆಯಬೇಕಾದ ಅನಿವಾರ್ಯತೆ ಇತ್ತು. ಇಂತಹ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಕೈಗೆ ರಾಖಿ ಕಟ್ಟಿದ ಮಹಿಳಾ ಮೋರ್ಚಾ ಸದಸ್ಯರು, ಅವರ ಕರ್ತವ್ಯಕ್ಕೆ ಗೌರವ ಸಲ್ಲಿಸಿದರು.
ಸಾಮಾನ್ಯವಾಗಿ ಪೊಲೀಸರನ್ನು ನಾವು ಕಠಿಣ ಕರ್ತವ್ಯ ನಿರ್ವಹಿಸುವ ಸಮವಸ್ತ್ರದ ವ್ಯಕ್ತಿಗಳಾಗಿ ನೋಡುತ್ತೇವೆ. ಆದರೆ, ರಾಖಿ ಕಟ್ಟುವ ಈ ಕ್ಷಣದಲ್ಲಿ ಪೊಲೀಸ್ ಠಾಣೆಯ ವಾತಾವರಣವೇ ಭಾವುಕವಾಗಿತ್ತು.ರಾಖಿ ಕಟ್ಟುವಾಗ ಮಹಿಳೆಯರ ಕಣ್ಣಲ್ಲಿ ಗೌರವ… ರಾಖಿ ಕಟ್ಟಿಸಿಕೊಳ್ಳುವ ಪೊಲೀಸರ ಕಣ್ಣಲ್ಲಿ ಭಾವುಕತೆ…
ನೀವು ಕಟ್ಟಿದ ಈ ರಕ್ಷೆ ಕೇವಲ ದಾರವಲ್ಲ… ಇದು ನಮ್ಮ ಜವಾಬ್ದಾರಿಯನ್ನು ನೆನಪಿಸುವ ಸಂಕೇತ. ನಾಡಿನ ಪ್ರತಿಯೊಬ್ಬ ಸಹೋದರಿಯ ರಕ್ಷಣೆ ನಮ್ಮ ಕರ್ತವ್ಯ. ನಿಮ್ಮ ಈ ಪ್ರೀತಿಗೆ ನಾವು ಸದಾ ಋಣಿ… ಎಂಬ ಭಾವನೆ ಪೊಲೀಸ್ ಸಿಬ್ಬಂದಿಯಲ್ಲಿತ್ತು.ಸಮವಸ್ತ್ರದ ಹಿಂದೆ ಇರುವ ಮಾನವೀಯತೆ… ಕರ್ತವ್ಯದ ನಡುವೆ ಇರುವ ಬಾಂಧವ್ಯ… ಈ ರಕ್ಷಾಬಂಧನ ಆಚರಣೆಯ ಮೂಲಕ ಮತ್ತೊಮ್ಮೆ ಅನಾವರಣಗೊಂಡಿತು.
ಪೊಲೀಸ್ ಠಾಣೆಯಲ್ಲೇ ನಡೆದ ಈ ರಕ್ಷಾಬಂಧನ, ರಕ್ಷಣೆ ಮತ್ತು ರಕ್ಷಾಬಂಧನದ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಯಿತು.ಈ ಭಾವನಾತ್ಮಕ ಸಂದರ್ಭದಲ್ಲಿ ಕುಮಟಾ ಮಂಡಲದ ಪ್ರಭಾರಿ ಶಾರದಾ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ್, ಪ್ರಧಾನ ಕಾರ್ಯದರ್ಶಿ ಶೈಲಾ ಗೌಡ, ಗಂಗೆ ಪಟಗಾರ, ಮಂಡಲದ ಉಪಾಧ್ಯಕ್ಷೆ ಪುಷ್ಪಾ ಶೇಟ್, ಪುರಸಭೆ ಸದಸ್ಯರಾದ ಗೀತಾ ಮುಕ್ರಿ ಹಾಗೂ ಮಹಾಲಕ್ಷ್ಮಿ ಶೇಟ್ ಉಪಸ್ಥಿತರಿದ್ದರು.


