ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಸುಂದ್ರಪಾಳ್ಯದಲ್ಲಿ ಅಪಾಯಕಾರಿ ಆಯುಧಗಳೊಂದಿಗೆ ಸುತ್ತಾಡುತ್ತಿದ್ದ ಆರೋಪಿಯೊಬ್ಬ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು 12:20ಕ್ಕೆ, ಆರೋಪಿ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡು ಸೋಮಸುಂದ್ರಪಾಳ್ಯದಲ್ಲಿ ಸುತ್ತಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂಡೇಪಾಳ್ಯ ಠಾಣೆಯ ಪಿಎಸ್‌ಐ ಸಚಿನ್ ಅವರಿಗೆ ಲಭ್ಯವಾಗಿದೆ.

ತಕ್ಷಣ ಅಪರಾಧ ವಿಭಾಗದ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರೊಂದಿಗೆ ಸ್ಥಳಕ್ಕೆ ತೆರಳಿದ ಪಿಎಸ್‌ಐ, ಸುಮಾರು 12:50ಕ್ಕೆ ಸೋಮಸುಂದ್ರಪಾಳ್ಯ ಕೆರೆಯ ಪಕ್ಕದ ಖಾಲಿ ಜಾಗೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರು ಆರೋಪಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಆಯುಧದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರ ಎಡ ಕೈಗೆ ಹೊಡೆದು ಗಾಯಗೊಳಿಸಿದ್ದಾನೆ.
ಬಳಿಕ ಪಿಎಸ್‌ಐ ಸಚಿನ್ ಅವರ ಮೇಲೂ ಆಯುಧದಿಂದ ಹಲ್ಲೆ ಮಾಡಲು ಆರೋಪಿ ಮುಂದಾಗಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ಹಲ್ಲೆಗೆ ಮುಂದುವರಿದಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸಚಿನ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಹಾಗೂ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರನ್ನು ಚಿಕಿತ್ಸೆಗಾಗಿ ಜಯನಗರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಳಿಯಿದ್ದ ಆಯುಧ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


