ದಾವಣಗೆರೆ ಜಿಲ್ಲಾ ಪೊಲೀಸ್ ತಂಡಕ್ಕೆ ಸಮಗ್ರ ಪ್ರಶಸ್ತಿ – ಶ್ವಾನದಳದ ‘ಧೃತಿ’ ಬೆಸ್ಟ್ ಡಾಗ್

ದಾವಣಗೆರೆ ಪೂರ್ವ ವಲಯದ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ನಡೆದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಇಂದು ತೆರೆ ಬಿದ್ದಿದೆ. ದಿನಾಂಕ 28 ಮತ್ತು 29ನೇ ಆಗಸ್ಟ್ 2026ರಂದು ಆಯೋಜಿಸಿದ್ದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ವಿವಿಧ ಪೊಲೀಸ್ ಕರ್ತವ್ಯ ಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಪೂರ್ವ ವಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೆಚ್ಚಿನ ಅಂಕಗಳನ್ನು ಗಳಿಸಿದ ದಾವಣಗೆರೆ ಜಿಲ್ಲಾ ಪೊಲೀಸ್ ತಂಡವು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಇದೇ ವೇಳೆ ಶ್ವಾನದಳದ ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ದಾವಣಗೆರೆ ಜಿಲ್ಲಾ ಪೊಲೀಸ್ ಶ್ವಾನದಳದ ‘ಧೃತಿ’ ಶ್ವಾನವು ಪೂರ್ವ ವಲಯ ಮಟ್ಟದ ಬೆಸ್ಟ್ ಡಾಗ್ ಪ್ರಶಸ್ತಿಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಪೂರ್ವ ವಲಯದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ರುದ್ರೇಶ್, ಆರ್‌ಎಫ್‌ಎಸ್‌ಎಲ್ ಉಪ ನಿರ್ದೇಶಕ ಡಾ. ಛಾಯಕುಮಾರಿ ಸೇರಿದಂತೆ ಪೂರ್ವ ವಲಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Related Articles

TRENDING ARTICLES