ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಘಟನೆ ನಡೆದಿದೆ.ಸೆಪ್ಟೆಂಬರ್ 8ರಂದು ಮಧ್ಯಾಹ್ನ 1 ಗಂಟೆ 16 ನಿಮಿಷಕ್ಕೆ ಲಾಡ್ಜ್‌ನ ಕೊಠಡಿಯೊಂದರಲ್ಲಿ ಮಹಿಳೆ ಹಾಗೂ ಓರ್ವ ವ್ಯಕ್ತಿಯನ್ನು ಕೂಡಿ ಹಾಕಿ, ಹೊರಗಿನಿಂದ ಬೀಗ ಹಾಕಲಾಗಿತ್ತು.
ಕೊಠಡಿಯೊಳಗಿದ್ದ ವ್ಯಕ್ತಿ ಕೂಡಲೇ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಪೊಲೀಸರ ಸಹಾಯ ಕೋರಿದ್ದಾರೆಮಾಹಿತಿ ಪಡೆದ 112 ಸಿಬ್ಬಂದಿ, ಬೇಗೂರು ಪೊಲೀಸ್ ಠಾಣೆಯ ಹೊಯ್ಸಳ-214ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಸತೀಶ್ ಕುಮಾರ್ ಹಾಗೂ ಎಪಿಸಿ ಮಂಜುನಾಥ್ ಬಿ.ಕೆ. ಅವರಿಗೆ ಮಾಹಿತಿ ರವಾನಿಸಿದ್ದಾರೆ.

ಮಾಹಿತಿ ಬಂದ ಕೇವಲ 12 ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಲಾಡ್ಜ್ ಮಾಲೀಕರೊಂದಿಗೆ ಸಮನ್ವಯ ಸಾಧಿಸಿ, ಕೊಠಡಿಯ ನಕಲಿ ಕೀ ಪಡೆದು ಒಳಗಿದ್ದ ಮಹಿಳೆ ಹಾಗೂ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬಳಿಕ ಇಬ್ಬರನ್ನು ಕೊಠಡಿಯೊಳಗೆ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿದ್ದ ಬೀರೇಂದ್ರ ಬೌರಾ ಎಂಬ ವ್ಯಕ್ತಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ.ಪೊಲೀಸರ ತ್ವರಿತ ಹಾಗೂ ಸಮಯೋಚಿತ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ವಿಳಂಬ ಮಾಡದೆ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.


