ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನೇ ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೈಲಿನಿಂದ ಬಿಡುಗಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನಿಖೆಯಲ್ಲಿ, ಶಿಕ್ಷಾ ಬಂದಿ ಶಂಕರ್.ಎ ಚಿಕ್ಕಪೇಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಹಾಗೂ ೧೦ ಸಾವಿರ ರೂಪಾಯಿ ದಂಡಕ್ಕೆ ಗುರಿಯಾಗಿರುವುದು ಪತ್ತೆಯಾಗಿದೆ.ಶಿಕ್ಷೆ ರದ್ದುಪಡಿಸುವಂತೆ ಶಂಕರ್.ಎ ಕರ್ನಾಟಕ ಹೈಕೋರ್ಟ್ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಖಾಯಂಗೊಂಡಿತ್ತು.
ಇದರ ನಡುವೆಯೇ, ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಎಸ್‌ಡಿಎ ಹಾಗೂ ಪ್ರಸ್ತುತ ಎಫ್‌ಡಿಎ ಆಗಿರುವ ಶ್ರೀಕಾಂತ್ ಎಸ್., ಸರ್ವೋಚ್ಚ ನ್ಯಾಯಾಲಯದ ಆದೇಶದ ಮಾದರಿಯಲ್ಲಿ ನಕಲಿ ದಾಖಲೆಯನ್ನು ಸಿದ್ಧಪಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸರ್ವೋಚ್ಚ ನ್ಯಾಯಾಲಯದಿಂದ ಶಂಕರ್.ಎ ಬಿಡುಗಡೆಗೆ ಆದೇಶವಾಗಿರುವಂತೆ ನಕಲಿ ದಾಖಲೆ ಸೃಷ್ಟಿಸಿ, ಅದರ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್.ಎ ಅವರನ್ನು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಶಂಕರ್.ಎ ಅವರ ಪತ್ನಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ, ಅಂದಿನ ಮುಖ್ಯ ಅಧೀಕ್ಷಕರೂ ತನ್ನ ಪತಿಯನ್ನು ಬಿಡುಗಡೆಗೊಳಿಸಲು ಸಹಕರಿಸಿದ್ದರು ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್.ಎ ಅವರನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದೇ ಪ್ರಕರಣದಲ್ಲಿ ಎಫ್‌ಡಿಎ ಶ್ರೀಕಾಂತ್ ಅವರನ್ನೂ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ. ನಾರಾಯಣ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸತೀಶ್.ಕೆ.ಎಂ ಅವರ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ-ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.


