ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೀವ್ರ ಮಾನಸಿಕ ಸಂಕಷ್ಟದಲ್ಲಿದ್ದ 30 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಸಮಯೋಚಿತವಾಗಿ ರಕ್ಷಿಸಿದ್ದಾರೆ.

ಸೆಪ್ಟೆಂಬರ್ 9ರಂದು ರಾತ್ರಿ 10 ಗಂಟೆ 38 ನಿಮಿಷಕ್ಕೆ ಚೋಳರಪಾಳ್ಯದ 10ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಮಹಿಳೆಯೊಬ್ಬರು ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಆಕೆಯ ಸಹೋದರಿ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು.

ಮಾಹಿತಿ ಬಂದ ಕೂಡಲೇ 112 ಸಿಬ್ಬಂದಿ, ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಹೊಯ್ಸಳ-87ರಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಲೆಂಕಪ್ಪ ವಿ.ಕೆ. ಹಾಗೂ ಎಪಿಸಿ ಶರಣಬಸಪ್ಪ ಬಿ.ಟಿ. ಅವರಿಗೆ ಮಾಹಿತಿ ರವಾನಿಸಿದ್ದರು.

ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ, ಮಹಿಳೆಯೊಂದಿಗೆ ಮಾತನಾಡಿ ಆಕೆಯನ್ನು ಸಮಾಧಾನಪಡಿಸಿ, ಸೂಕ್ತ ಆಪ್ತಸಮಾಲೋಚನೆ ನಡೆಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಕುಟುಂಬದವರ ಬೆಂಬಲ ಪಡೆಯುವ ಮಹತ್ವದ ಕುರಿತು ತಿಳಿವಳಿಕೆ ನೀಡಿದ ಪೊಲೀಸರು, ಮಹಿಳೆಯ ಮೇಲೆ ನಿರಂತರವಾಗಿ ಗಮನಹರಿಸುವಂತೆ ಆಕೆಯ ಸಹೋದರಿಗೆ ಸೂಚಿಸಿದ್ದಾರೆ.

ಪೊಲೀಸರ ಸಮಯೋಚಿತ ಕಾರ್ಯಾಚರಣೆ, ಆಪ್ತಸಮಾಲೋಚನೆ ಹಾಗೂ ಕುಟುಂಬದವರ ಸಹಕಾರದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ತೀವ್ರ ಮಾನಸಿಕ ಸಂಕಷ್ಟದಲ್ಲಿರುವ ವ್ಯಕ್ತಿಗಳ ಕುರಿತು ಮಾಹಿತಿ ದೊರೆತ ತಕ್ಷಣ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Related Articles

TRENDING ARTICLES