ಬೆಂಗಳೂರಿನ ಎಸ್.ಜೆ. ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಸೆಪ್ಟೆಂಬರ್ 8ರಂದು ಸಂಜೆ 4 ಗಂಟೆ 10 ನಿಮಿಷಕ್ಕೆ ಎಸ್.ಬಿ. ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್‌ವೊಂದರ ಲಿಫ್ಟ್‌ನಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದರು.

ಲಿಫ್ಟ್‌ನಿಂದ ಹೊರಬರಲಾಗದೆ ತುರ್ತು ಸಹಾಯಕ್ಕಾಗಿ ಯುವಕರು ನಮ್ಮ-112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು.ಮಾಹಿತಿ ಪಡೆದ ಕೂಡಲೇ ನಮ್ಮ-112 ಸಿಬ್ಬಂದಿ, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೊಯ್ಸಳ-72ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಮಲ್ಲೇಶ್ ಎನ್. ಹಾಗೂ ಎಎಚ್‌ಸಿ ಸುನಿಲ್ ಕುಮಾರ್ ಎಸ್. ಅವರಿಗೆ ಮಾಹಿತಿ ರವಾನಿಸಿದ್ದರು.
ಮಾಹಿತಿ ಬಂದ ಕೇವಲ 3 ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.ಬಳಿಕ ಲಿಫ್ಟ್ ನಿರ್ವಹಣಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಲಿಫ್ಟ್‌ನ ಬಾಗಿಲು ತೆರೆಯಿಸಿ, ಒಳಗೆ ಸಿಲುಕಿದ್ದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.
ಪೊಲೀಸರ ಸಮಯೋಚಿತ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಬ್ಬರನ್ನೂ ರಕ್ಷಿಸಲಾಗಿದೆ.ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ವಿಳಂಬ ಮಾಡದೆ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಈ ಕಾರ್ಯಾಚರಣೆ ಬೆಂಗಳೂರು ನಗರ ಪೊಲೀಸರ ತ್ವರಿತ ಹಾಗೂ ಪರಿಣಾಮಕಾರಿ ಸ್ಪಂದನೆಗೆ ಮತ್ತೊಂದು ಉದಾಹರಣೆಯಾಗಿದೆ.


