ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟ್‌ನಲ್ಲಿ ನಡೆದ ₹14 ಲಕ್ಷ ನಗದು ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.ಕುಟುಂಬ ಸಮೇತರಾಗಿ ಊಟಕ್ಕೆ ತೆರಳಿದ್ದ ವೇಳೆ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ವಾರ್ಡ್ರೋಬ್‌ನಲ್ಲಿದ್ದ ₹14 ಲಕ್ಷ ನಗದು ಇದ್ದ ಬ್ಯಾಗ್‌ನ್ನು ಕಳವು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿ ಆಧರಿಸಿ ಜುಲೈ 29ರಂದು ಕಲ್ಯಾಣನಗರ ಸರ್ವಿಸ್ ರಸ್ತೆಯ ಬಳಿ ಇಬ್ಬರು ಆರೋಪಿಗಳನ್ನು ಕಾರು ಹಾಗೂ ₹34 ಸಾವಿರ ನಗದು ಸಮೇತ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಬಾಣಸವಾಡಿ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದ ಬಳಿಕ, ಅವರ ಮಾಹಿತಿ ಮೇರೆಗೆ ಜ್ಯೂವೆಲರಿ ಅಂಗಡಿಗಳು ಹಾಗೂ ಆರೋಪಿಯ ಮನೆಯಿಂದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹2.70 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಆರೋಪಿಗಳ ಬಂಧನದಿಂದ ಒಟ್ಟು 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು, ₹3.04 ಲಕ್ಷ ನಗದು ಹಾಗೂ ಒಂದು ಕಾರು ಜಪ್ತಿಯಾಗಿದ್ದು, ಇವುಗಳ ಒಟ್ಟು ಮೌಲ್ಯ ₹77.50 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಬಂಧನದಿಂದ ಬಾಣಸವಾಡಿ ಹಾಗೂ ಹೆಣ್ಣೂರು ಠಾಣೆಯ ತಲಾ ಎರಡು ಪ್ರಕರಣಗಳು, ಮೈಕೋ ಲೇಔಟ್, ಮಾದನಾಯಕನಹಳ್ಳಿ ಹಾಗೂ ಕೊಳ್ಳೇಗಾಲ ಟೌನ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳು ಪತ್ತೆಯಾಗಿವೆ.
ಬಂಧಿತ ಇಬ್ಬರು ಆರೋಪಿಗಳನ್ನು ಆಗಸ್ಟ್ 18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪ ವಿಭಾಗದ ಎಸಿಪಿ ಅನುಷಾ ಜಿ. ಅವರ ನೇತೃತ್ವದಲ್ಲಿ, ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್ ಸುದರ್ಶನ್ ಹೆಚ್.ಸಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.


