ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಹಾಗೂ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದ ಎರಡು ಮನೆ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.ಮನೆಯ ಕಿಟಕಿ ಹಾಗೂ ಹಿಂಬಾಗಿಲಿನ ಮೂಲಕ ನುಗ್ಗಿದ್ದ ಕಳ್ಳರು, ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿ ಆಧರಿಸಿ ಆಗಸ್ಟ್ 26ರಂದು ಹರಿನಗರದ ನಿವಾಸದಿಂದ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿ ತನ್ನ ಅಪ್ರಾಪ್ತ ಮಗನೊಂದಿಗೆ ಸೇರಿಕೊಂಡು ಎರಡೂ ಮನೆಗಳಲ್ಲಿ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಆರೋಪಿಯನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಕೆಲವನ್ನು ಹರಿನಗರ ಹಾಗೂ ಹೆಬ್ಬಗೋಡಿಯ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಿವಿಧ ಸ್ಥಳಗಳಲ್ಲಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ.
ಆರೋಪಿಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 161 ಗ್ರಾಂ ಚಿನ್ನಾಭರಣ ಹಾಗೂ 150 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಜಪ್ತಿಯಾಗಿರುವ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ಒಟ್ಟು ಮೌಲ್ಯ ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಗನು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿರುವುದರಿಂದ, ಕಾನೂನು ಪ್ರಕಾರ ಆತನನ್ನು ತಾಯಿಯೊಂದಿಗೆ ಕಳುಹಿಸಲಾಗಿದೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ ವಿಭಾಗದ ಎಸಿಪಿ ಗೋಪಾಲ್ ಡಿ. ಜೋಗೀನ್ ಅವರ ನೇತೃತ್ವದಲ್ಲಿ, ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್ ಟಿ. ಕೃಷ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.


