ತಲಘಟ್ಟಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹17 ಲಕ್ಷದ ಚಿನ್ನ ಜಪ್ತಿ

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯ ಮನೆಯೊಂದರಲ್ಲಿ 145 ಗ್ರಾಂ ಚಿನ್ನಾಭರಣ ಕಳವು ಪ್ರಕರಣ ಪತ್ತೆಯಾಗಿದೆ.ಆಗಸ್ಟ್ 6ರಿಂದ 8ರ ನಡುವೆ ಮನೆಯಲ್ಲಿದ್ದ ಚಿನ್ನಾಭರಣ ಕಳುವಾಗಿದ್ದು, ಮನೆಯಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆಗಸ್ಟ್ 27ರಂದು ಯಲಹಂಕ ನಾಲ್ಕನೇ ಹಂತದ ಬಳಿ ಕೇರ್‌ಟೇಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಚಿನ್ನಾಭರಣ ಕಳವು ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ನ್ಯಾಯಾಲಯದಿಂದ ಪೊಲೀಸ್ ಅಭಿರಕ್ಷೆಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಕೆಲವನ್ನು ಕಲಬುರಗಿಯ ಎರಡು ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಹಾಗೂ ಉಳಿದ ಚಿನ್ನಾಭರಣಗಳನ್ನು ಕಲಬುರಗಿಯಲ್ಲಿರುವ ಸ್ನೇಹಿತನಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದಾನೆ.

ಆರೋಪಿಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎರಡು ಜ್ಯೂವೆಲರಿ ಅಂಗಡಿಗಳಿಂದ 90 ಗ್ರಾಂ ಹಾಗೂ ಆರೋಪಿಯ ಸ್ನೇಹಿತನಿಂದ 20 ಗ್ರಾಂ ಚಿನ್ನದ ಗಟ್ಟಿ ಸೇರಿದಂತೆ ಒಟ್ಟು 110 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಚಿನ್ನದ ಮೌಲ್ಯ 17 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಆರೋಪಿಯನ್ನು ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ ವಿಭಾಗದ ಎಸಿಪಿ ಗೋಪಾಲ ಡಿ. ಜೋಗೀನ್ ಅವರ ನೇತೃತ್ವದಲ್ಲಿ, ತಲಘಟ್ಟಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಎಸ್. ಚೌಧರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

TRENDING ARTICLES