ಪೊಲೀಸ್ ಸಿಬ್ಬಂದಿ ಮಂಡಳಿಯು ದಿನಾಂಕ 29-08-2026ರಂದು ಕೈಗೊಂಡ ನಿರ್ಣಯದಂತೆ, ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಕಚೇರಿಯಿಂದ ದಿನಾಂಕ 01-09-2026ರಂದು ಆದೇಶ ಹೊರಡಿಸಲಾಗಿದೆ.

ಈ ಆದೇಶದನ್ವಯ ಒಟ್ಟು 69 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ರಾಜ್ಯದ ವಿವಿಧ ಪೊಲೀಸ್ ಘಟಕಗಳು ಹಾಗೂ ವಿಭಾಗಗಳಿಗೆ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಕರ್ನಾಟಕ ಲೋಕಾಯುಕ್ತ, ಸಿಐಡಿ, ರಾಜ್ಯ ಗುಪ್ತವಾರ್ತೆ, ಆಂತರಿಕ ಭದ್ರತಾ ವಿಭಾಗ, ಡಿಸಿಆರ್‌ಇ, ಸಿಸಿಬಿ ಸೇರಿದಂತೆ ವಿವಿಧ ಪ್ರಮುಖ ಘಟಕಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇದರ ಜೊತೆಗೆ ಬೆಂಗಳೂರು ನಗರ, ಮೈಸೂರು, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಬೀದರ್, ಉತ್ತರ ಕನ್ನಡ, ಕಲಬುರಗಿ, ಚಿತ್ರದುರ್ಗ, ವಿಜಯಪುರ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಘಟಕಗಳಿಗೂ ಇನ್ಸ್‌ಪೆಕ್ಟರ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ.
ಆದೇಶದಲ್ಲಿರುವ ಅಧಿಕಾರಿಗಳನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಬಳಸಿಕೊಳ್ಳದೆ ನಿಯುಕ್ತಿಗೊಳಿಸಲಾದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದ ಕುರಿತು ಪಾಲನಾ ವರದಿಯನ್ನು ಪೊಲೀಸ್ ಪ್ರಧಾನ ಕಚೇರಿಗೆ ಸಲ್ಲಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಘಟಕಗಳ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಈ ಸ್ಥಳ ನಿಯುಕ್ತಿ ಆದೇಶ ಮಹತ್ವ ಪಡೆದಿದೆ.






