ಬೆಂಗಳೂರು: ವಿವಿಧ ಜಿಲ್ಲೆಗಳ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ ಸಂವಾದ ನಡೆಸಿದರು.
ಪೊಲೀಸ್ ಕಾನ್ಸ್‌ಟೇಬಲ್‌ಗಳು, ಹೆಡ್ ಕಾನ್ಸ್‌ಟೇಬಲ್‌ಗಳು, ಎಎಸ್‌ಐ ಹಾಗೂ ಎಸ್‌ಐಗಳು ಸಂವಾದದಲ್ಲಿ ಭಾಗವಹಿಸಿದ್ದರು. ಇಲಾಖೆಯ ಕಾರ್ಯವೈಖರಿ, ಕರ್ತವ್ಯದ ವೇಳೆ ಎದುರಾಗುವ ಸವಾಲುಗಳು ಹಾಗೂ ಸಿಬ್ಬಂದಿಯ ಸಮಸ್ಯೆಗಳ ಕುರಿತು ಸಚಿವರು ನೇರವಾಗಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ‘ಬೇಡ ಬ್ರೋ’ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚಿಸಿದರು.

ಅಪರಾಧ ಹಿನ್ನೆಲೆಯುಳ್ಳ ರೌಡಿಗಳೊಂದಿಗೆ ಯಾವುದೇ ರೀತಿಯ ನೆಂಟಸ್ತಿಕೆ ಅಥವಾ ಅನಗತ್ಯ ಸಂಪರ್ಕ ಹೊಂದಬಾರದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಮಹಿಳೆಯರಿಗೆ ಸಂಬಂಧಿಸಿದ ದೂರುಗಳು ಬಂದಾಗ ಯಾವುದೇ ವಿಳಂಬ ಮಾಡದೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ತವ್ಯದ ವೇಳೆ ಸಾರ್ವಜನಿಕರೊಂದಿಗೆ ಜವಾಬ್ದಾರಿಯುತವಾಗಿ ಹಾಗೂ ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಇದರ ಜೊತೆಗೆ, ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡರು. ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಪೊಲೀಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿ ಇನ್ನಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


