ಆನೇಕಲ್‌ನಲ್ಲಿ ವ್ಹೀಲಿಂಗ್ ಮಾಡುವ ಶೋಕಿಗಾಗಿ ಹಾಗೂ ಸುಲಭವಾಗಿ ಹಣ ಗಳಿಸುವ ದುರಾಶೆಯಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಆನೇಕಲ್ ಠಾಣೆ ಪೊಲೀಸರು ಭೇದಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿದ್ದ ಬೈಕ್ ಕಳವು ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಜಾಡು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಸುಮಾರು 16ರಿಂದ 17 ಲಕ್ಷ ರೂಪಾಯಿ ಮೌಲ್ಯದ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆನೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿ, ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ಸಿದ್ದನಗೌಡ ಮತ್ತು ಮುನಿರತ್ನ, ಎಎಸ್‌ಐ ಪ್ರಕಾಶ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಶೇಖರ್, ಸುರೇಶ್, ಸತೀಶ್, ಭಾಸ್ಕರ್, ಅನಿಲ್, ಶ್ರೀಧರ್ ಹಾಗೂ ಕಾಯಂಬತರಣಯ್ಯ ಸೇರಿದಂತೆ ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.


