ರಾಜ್ಯದಲ್ಲಿ 21 ಅಧಿಕಾರಿಗಳ ವರ್ಗಾವಣೆ – ಹಲವು ಜಿಲ್ಲೆಗಳ ಎಸ್‌ಪಿ, ಆಯುಕ್ತರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ರಾಜ್ಯ ಸರ್ಕಾರ 21 ಐಎಎಸ್, ಐಎಫ್‌ಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಹಲವು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಐಪಿಎಸ್ ಅಧಿಕಾರಿಗಳ ಪೈಕಿ ಹರಿಶೇಖರನ್ ಪಿ. ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿ, ದೇವಜ್ಯೋತಿ ರೇ ಅವರನ್ನು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿಯಾಗಿ ಹಾಗೂ ಎಂ. ನಂಜುಂಡಸ್ವಾಮಿ ಅವರನ್ನು ದೂರು ಮತ್ತು ಮಾನವ ಹಕ್ಕುಗಳ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.

ಅಮಿತ್ ಸಿಂಗ್ ಅವರನ್ನು ಕೆಎಸ್‌ಆರ್‌ಪಿ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಬೊರಸೆ ಭೂಷಣ್ ಗುಲಾಬರಾವ್ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನಿಯೋಜಿಸಲಾಗಿದೆ. ಬೆಳಗಾವಿ ನಗರದ ನೂತನ ಪೊಲೀಸ್ ಆಯುಕ್ತರಾಗಿ ನಿಕಮ್ ಪ್ರಕಾಶ್ ಅಮೃತ್ ಅವರನ್ನು ನೇಮಿಸಲಾಗಿದೆ.

ಇನ್ನು ಆರ್. ಚೇತನ್ ಅವರನ್ನು ಪಶ್ಚಿಮ ವಲಯದ ಡಿಐಜಿಪಿಯಾಗಿ ಹಾಗೂ ಶಿವಪ್ರಕಾಶ್ ದೇವರಾಜು ಅವರನ್ನು ಆ್ಯಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಎಸ್‌ಪಿಯಾಗಿದ್ದ ಕುಶಾಲ್ ಚೌಕ್ಸೆ ಅವರನ್ನು ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಪದ್ಮಿನಿ ಸಾಹೂ ಅವರನ್ನು ನೇಮಿಸಲಾಗಿದೆ. ಬೆಂಗಳೂರು ಅಪರಾಧ ವಿಭಾಗದ ಸಿಸಿಬಿ-1 ಡಿಸಿಪಿಯಾಗಿ ಆರ್. ಶ್ರೀನಿವಾಸ್ ಗೌಡ ಅವರನ್ನು ನೇಮಿಸಲಾಗಿದೆ.

ಇದೇ ವೇಳೆ ಡಾ. ಶಿವಕುಮಾರ್ ಅವರನ್ನು ಲೋಕಾಯುಕ್ತ ಎಸ್‌ಪಿಯಾಗಿ, ಸಾಹಿಲ್ ಬಾಗ್ಲಾ ಅವರನ್ನು ಕೊಪ್ಪಳ ಜಿಲ್ಲಾ ಎಸ್‌ಪಿಯಾಗಿ, ರೋಷನ್ ಜಗದೀಶ್ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌ಪಿಯಾಗಿ ಹಾಗೂ ಮಿಥುನ್ ಎಚ್.ಎನ್. ಅವರನ್ನು ಗದಗ ಜಿಲ್ಲಾ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ವಿಭಾಗದಲ್ಲಿಯೂ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಐಎಫ್‌ಎಸ್ ಅಧಿಕಾರಿ ಲಿಂಗರಾಜ್ ಎಸ್.ಎಸ್. ಅವರನ್ನು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾಗಿ ನೇಮಿಸಲಾಗಿದೆ.

ಪಾಟೀಲ್ ಯಲಗೌಡ ಶಿವನಗೌಡ ಅವರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕರಾಗಿ ನೇಮಿಸಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಹೆಚ್ಚುವರಿ ಉಸ್ತುವಾರಿಯನ್ನೂ ನೀಡಲಾಗಿದೆ. ದಿಗ್ವಿಜಯ್ ಬೋಡ್ಕೆ, ಲವಿಶ್ ಒರ್ಡಿಯಾ ಹಾಗೂ ಮುಕುಲ್ ಜೈನ್ ಅವರಿಗೂ ವಿವಿಧ ಹುದ್ದೆಗಳ ಹೆಚ್ಚುವರಿ ಜವಾಬ್ದಾರಿ ಮತ್ತು ವರ್ಗಾವಣೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

Related Articles

TRENDING ARTICLES