ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.. 30 ಮೊಬೈಲ್ ಜಪ್ತಿ

ಬಸ್ ನಿಲ್ದಾಣ ಹಾಗೂ ರಸ್ತೆಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್.ಎಂ.ಸಿ. ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 5.85 ಲಕ್ಷ ರೂಪಾಯಿ ಮೌಲ್ಯದ 30 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 5ರಂದು ಪೀಣ್ಯದ ಎಂ.ಇ.ಐ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು, ಜುಲೈ 7ರಂದು ಪೀಣ್ಯ ಎಸ್‌ಆರ್‌ಎಸ್ ಸರ್ಕಾರಿ ಡಿಗ್ರಿ ಕಾಲೇಜು ಸರ್ವಿಸ್ ರಸ್ತೆಯಲ್ಲಿ ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನ ವಿವಿಧೆಡೆ ನಡೆಸಿದ್ದ ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಾರಾಟಕ್ಕೆಂದು ಬಚ್ಚಿಟ್ಟಿದ್ದ 30 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಯಶವಂತಪುರ ಉಪವಿಭಾಗದ ಎಸಿಪಿ ಬಿ.ವೈ. ರೇಣುಕಾ ಪ್ರಸಾದ್ ಅವರ ನೇತೃತ್ವದಲ್ಲಿ, ಆರ್.ಎಂ.ಸಿ. ಯಾರ್ಡ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಟಿ.ಸಿ. ಶಿವಕುಮಾರ್ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.

Related Articles

TRENDING ARTICLES