ಬಂಧಿತ ಆರೋಪಿಗಳಿಂದ ಒಟ್ಟು 36 ಲಕ್ಷ ರೂಪಾಯಿ ಮೌಲ್ಯದ 196 ಗ್ರಾಂ ಚಿನ್ನಾಭರಣ ಹಾಗೂ 4 ಕೆಜಿ 759 ಗ್ರಾಂ ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮೊದಲ ಪ್ರಕರಣದಲ್ಲಿ, ಮೈಕೋ ಲೇಔಟ್‌ನ ನಿವಾಸಿಗಳು ಉತ್ತರ ಪ್ರದೇಶಕ್ಕೆ ತೆರಳಿದ್ದ ವೇಳೆ, ಮನೆಯ ಬೀಗ ಒಡೆದು ಚಿನ್ನಾಭರಣ ಕಳವು ಮಾಡಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬೇಗೂರು ಪೊಲೀಸರು, ಜೂನ್ 5ರಂದು ಮೈಕೋ ಲೇಔಟ್‌ನ ಮೋರಿಯ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಬೆಂಗಳೂರಿನ ವಿವಿಧ ಜ್ಯುವೆಲ್ಲರಿಗಳಲ್ಲಿ ಅಡಮಾನ ಇಟ್ಟಿರುವುದು ಪತ್ತೆಯಾಗಿದೆ.ಪೊಲೀಸರು 121 ಗ್ರಾಂ ಚಿನ್ನ ಹಾಗೂ 4 ಕೆಜಿ 759 ಗ್ರಾಂ ಬೆಳ್ಳಿ, ಒಟ್ಟು 26 ಲಕ್ಷ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಈ ಬಂಧನದಿಂದ ಬೇಗೂರು ಠಾಣೆಯ 3, ರಾಮಮೂರ್ತಿನಗರದ 2, ಅನುಗೊಂಡನಹಳ್ಳಿಯ 1, ಅವಲಹಳ್ಳಿಯ 1 ಹಾಗೂ ಕೆ.ಆರ್.ಪುರಂ ಠಾಣೆಯ 1 ಸೇರಿದಂತೆ ಒಟ್ಟು 8 ಮನೆ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ.ಆರೋಪಿಯನ್ನು ಜೂನ್ 19ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇನ್ನು ಎರಡನೇ ಪ್ರಕರಣದಲ್ಲಿ, ವಿಶ್ವಪ್ರಿಯಾ ಲೇಔಟ್‌ನ ನಿವಾಸಿಯೊಬ್ಬರ ಮನೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 1ರ ನಡುವೆ ಚಿನ್ನಾಭರಣ ಕಳವಾಗಿತ್ತು.ತಮ್ಮ ಮೈದುನನ ಮೇಲೆಯೇ ಅನುಮಾನವಿರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು.ತನಿಖೆ ವೇಳೆ ಆರೋಪಿ ದೆಹಲಿಯಲ್ಲಿ ಇರುವುದಾಗಿ ತಿಳಿದುಬಂದಿದ್ದು, ಜೂನ್ 29ರಂದು ದೆಹಲಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಯಿತು.
ವಿಚಾರಣೆ ಬಳಿಕ ಬೆಂಗಳೂರು ಹಾಗೂ ದೆಹಲಿಯ ವಿವಿಧ ಜ್ಯುವೆಲ್ಲರಿಗಳಲ್ಲಿದ್ದ 75 ಗ್ರಾಂ ಚಿನ್ನಾಭರಣವನ್ನು, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಮಾಲನ್ನು ಪೊಲೀಸರು ಜುಲೈ 2ರಿಂದ 12ರ ಅವಧಿಯಲ್ಲಿ ಜಪ್ತಿ ಮಾಡಿದ್ದಾರೆ.ಈ ಆರೋಪಿಯನ್ನು ಜುಲೈ 8ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳವು ಪ್ರಕರಣಗಳನ್ನು ಬೇಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಬೇಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಯಶಸ್ವಿ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, ಐಪಿಎಸ್ ಹಾಗೂ ಎಸಿಪಿ ಕೆ.ಎಂ. ಸತೀಶ ಅವರ ಮಾರ್ಗದರ್ಶನದಲ್ಲಿ, ಬೇಗೂರು ಇನ್ಸ್‌ಪೆಕ್ಟರ್ ಸಂದೀಪ್ ಎಸ್ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.


