ಬೆಂಗಳೂರಲ್ಲಿ ಆಟೋ ಕಳವು ಮಾಡುತ್ತಿದ್ದ ಆರೋಪಿ ಬಂಧನ.. 40 ಲಕ್ಷ ಮೌಲ್ಯದ 10 ಆಟೋ ಜಪ್ತಿ

ಬೆಂಗಳೂರಿನ ವಿವಿಧೆಡೆ ಆಟೋರಿಕ್ಷಾಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯಿಂದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ 10 ಆಟೋರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 19ರಂದು ಕರಿಯಮ್ಮನ ಅಗ್ರಹಾರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಆಟೋರಿಕ್ಷಾವೊಂದು ಕಳವಾಗಿತ್ತು.ಈ ಸಂಬಂಧ ಎಲೆಕ್ಟ್ರಿಕ್ ಆಟೋ ಮೊಬಿಲಿಟಿ ಸಂಸ್ಥೆಯ ಟೀಮ್ ಲೀಡರ್ ಜುಲೈ 30ರಂದು ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಸಿಸಿಟಿವಿ ದೃಶ್ಯಗಳು ಹಾಗೂ ಖಚಿತ ಮಾಹಿತಿ ಆಧರಿಸಿ ಆರೋಪಿಗಾಗಿ ಶೋಧ ನಡೆಸಿದ್ದರು.ಜುಲೈ 31ರಂದು ವರ್ತೂರಿನ ಗುಂಜೂರು ಬಳಿ ಆರೋಪಿಯನ್ನು ಒಂದು ಕಳವು ಮಾಡಿದ್ದ ಆಟೋರಿಕ್ಷಾ ಸಮೇತ ವಶಕ್ಕೆ ಪಡೆಯಲಾಯಿತು.ವಿಚಾರಣೆ ವೇಳೆ ಆರೋಪಿ ಬೆಂಗಳೂರಿನ ವಿವಿಧೆಡೆ ಹಲವು ಆಟೋರಿಕ್ಷಾಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆರೋಪಿ ಕಳವು ಮಾಡಿದ್ದ ಆಟೋಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕರಿಯಮ್ಮನ ಅಗ್ರಹಾರದ ಖಾಲಿ ಜಾಗವೊಂದರಲ್ಲಿ ಬಚ್ಚಿಟ್ಟಿದ್ದ ಇನ್ನೂ 9 ಆಟೋರಿಕ್ಷಾಗಳನ್ನು ಪೊಲೀಸರು ಆಗಸ್ಟ್ 1ರಂದು ವಶಪಡಿಸಿಕೊಂಡಿದ್ದಾರೆ.ಒಟ್ಟು 10 ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳ ಅಂದಾಜು ಮೌಲ್ಯ 40 ಲಕ್ಷ ರೂಪಾಯಿ.

ಈ ಪೈಕಿ ಮಾರತ್ತಹಳ್ಳಿ ಠಾಣೆಯ ಒಂದು ಕಳವು ಪ್ರಕರಣ ಪತ್ತೆಯಾಗಿದ್ದು, ಉಳಿದ 9 ಆಟೋರಿಕ್ಷಾಗಳ ಮಾಲೀಕರ ಪತ್ತೆ ಕಾರ್ಯ ಮುಂದುವರಿದಿದೆ.ಆರೋಪಿಯನ್ನು ಆಗಸ್ಟ್ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಮಾರತ್ತಹಳ್ಳಿ ಉಪವಿಭಾಗದ ಎಸಿಪಿ ಸುಧಾಕರ್ ಎ.ಬಿ ಅವರ ನೇತೃತ್ವದಲ್ಲಿ, ಮಾರತ್ತಹಳ್ಳಿ ಇನ್ಸ್‌ಪೆಕ್ಟರ್ ಪುನೀತ್ ಬಿ.ಎನ್, ಪಿಎಸ್‌ಐ ರವಿಚಂದ್ರ ಎಸ್.ಎ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.

Related Articles

TRENDING ARTICLES