ವೈಟ್‌ಫೀಲ್ಡ್‌ನಲ್ಲಿ ಲಾರಿಯಿಂದ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಬಾಕ್ಸ್‌ಗಳ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸುಮಾರು 30 ಲಕ್ಷ ರೂಪಾಯಿ ಮೌಲ್ಯದ 130 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 25ರಂದು ಹೈದರಾಬಾದ್‌ನಿಂದ ಬಂದಿದ್ದ ಮೊಬೈಲ್ ಪಾರ್ಸೆಲ್ ಬಾಕ್ಸ್‌ಗಳನ್ನು ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿ ಕಸ್ಟಮ್ಸ್ ಕಚೇರಿ ಬಳಿ ಕಂಟೈನರ್‌ನಿಂದ ಅನ್‌ಲೋಡ್ ಮಾಡಲಾಗಿತ್ತು.ಬಳಿಕ ಪಾರ್ಸೆಲ್ ಬಾಕ್ಸ್‌ಗಳಿಗೆ ಬೀಗ ಹಾಕದೆ ತೆರಳಿದ್ದ ವೇಳೆ, ಅಪರಿಚಿತರು ಮೊಬೈಲ್‌ಗಳಿದ್ದ ಮೂರು ಪಾರ್ಸೆಲ್ ಬಾಕ್ಸ್‌ಗಳನ್ನು ಕಳವು ಮಾಡಿದ್ದರು.
ಈ ಸಂಬಂಧ ಕಂಪನಿಯ ಮಾಲೀಕರು ಜುಲೈ 27ರಂದು ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ವೈಟ್‌ಫೀಲ್ಡ್ ಪೊಲೀಸರು, ಸಿಸಿಟಿವಿ ದೃಶ್ಯಗಳು ಹಾಗೂ ಖಚಿತ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ್ದರು.ಇದರ ಫಲವಾಗಿ ಜುಲೈ 28ರಂದು ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿರುವ ಬೇಕರಿಯೊಂದರ ಬಳಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಆತನ ಬಳಿಯಿದ್ದ ಕಳವು ಮಾಡಿದ್ದ ಮೂರು ಪಾರ್ಸೆಲ್ ಬಾಕ್ಸ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ವಿಚಾರಣೆ ವೇಳೆ ಆರೋಪಿ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.ಬಂಧಿತ ಆರೋಪಿಯನ್ನು ಜುಲೈ 28ರಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ರೀನಾ ಸುವರ್ಣ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಪ್ರೀತಮ್ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.


