ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ: 5.73 ಕೋಟಿ ಮೌಲ್ಯದ ಕಳುವಾದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

ಶಿವಮೊಗ್ಗ: ಸ್ವತ್ತು ಕಳವು ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಕಳೆದುಹೋದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.

ಆಗಸ್ಟ್ 24ರಂದು ಶಿವಮೊಗ್ಗದ ಪೊಲೀಸ್ ಡಿಎಆರ್ ಸಭಾಂಗಣದಲ್ಲಿ ಕಳವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕವಾಯತು ಹಮ್ಮಿಕೊಳ್ಳಲಾಗಿತ್ತು.

2026ನೇ ಸಾಲಿನಲ್ಲಿ ವರದಿಯಾದ ಸ್ವತ್ತು ಕಳವು ಪ್ರಕರಣಗಳ ಪೈಕಿ 142 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 5 ಕೋಟಿ 73 ಲಕ್ಷದ 46 ಸಾವಿರದ 923 ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ, ಮೊಬೈಲ್ ಫೋನ್, ವಾಹನಗಳು, ನಗದು, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಸೇರಿದಂತೆ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರ ಜೊತೆಗೆ ಹಿಂದಿನ ವರ್ಷಗಳಲ್ಲಿ ದಾಖಲಾಗಿದ್ದ 32 ಪ್ರಕರಣಗಳನ್ನೂ ಪತ್ತೆಹಚ್ಚಲಾಗಿದ್ದು, ಒಟ್ಟಾರೆ 174 ಸ್ವತ್ತು ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು CEIR ಪೋರ್ಟಲ್‌ ಮೂಲಕ ಕಳೆದುಹೋಗಿದ್ದ 1164 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನೂ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.

ಕಳುವಾದ ಸ್ವತ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕರು ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದರು.

Related Articles

TRENDING ARTICLES