ಹೊಯ್ಸಳ ಪೊಲೀಸರ ಸಮಯಪ್ರಜ್ಞೆ: 15 ವರ್ಷದ ಬಾಲಕನ ಜೀವ ರಕ್ಷಣೆ

ಬೆಂಗಳೂರು: ಭಾವನಾತ್ಮಕ ಒತ್ತಡಕ್ಕೆ ಒಳಗಾಗಿ ಐದು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಜಿಗಿಯಲು ಮುಂದಾಗಿದ್ದ 15 ವರ್ಷದ ಬಾಲಕನನ್ನು ಹೊಯ್ಸಳ ಪೊಲೀಸರು ಸಮಯೋಚಿತವಾಗಿ ಮಧ್ಯಪ್ರವೇಶಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಆಗಸ್ಟ್ 22ರಂದು ರಾತ್ರಿ 8:48ಕ್ಕೆ ಅಕ್ಷಯನಗರದ ಎಲೆನಹಳ್ಳಿ 1ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಬಾಲಕನ ಸಹೋದರ ಕೂಡಲೇ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ನೆರವು ಕೋರಿದ್ದರು.

ಮಾಹಿತಿ ಪಡೆದ ಬೇಗೂರು ಠಾಣೆಯ ಹೊಯ್ಸಳ-215 ಸಿಬ್ಬಂದಿ ಎಎಸ್‌ಐ ಸತೀಶ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಶಬೀರ್ ಮಮದಾಪೂರ್ ಕೇವಲ 8 ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ಗೆ ಸಂಬಂಧಿಸಿದ ವಿಚಾರದಿಂದ ಬಾಲಕ ತೀವ್ರ ಭಾವನಾತ್ಮಕ ಒತ್ತಡಕ್ಕೆ ಒಳಗಾಗಿದ್ದ ಎನ್ನುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಪೊಲೀಸರು ಎಚ್ಚರಿಕೆಯಿಂದ ಬಾಲಕನ ಬಳಿ ತೆರಳಿ, ಸಮಯೋಚಿತವಾಗಿ ಮಧ್ಯಪ್ರವೇಶಿಸಿ ಆತನನ್ನು ಅಪಾಯಕಾರಿ ಪರಿಸ್ಥಿತಿಯಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬಾಲಕನ ಸಹೋದರನ ಸಮಯಪ್ರಜ್ಞೆ ಹಾಗೂ ಪೊಲೀಸರ ತ್ವರಿತ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ್ದು, ‘ನಮ್ಮ-112’ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಬಲಪಡಿಸಿದೆ.

Related Articles

TRENDING ARTICLES