ಬೀದರ್ ಜಿಲ್ಲಾ ಪೊಲೀಸರ ಹೆಮ್ಮೆಯ ‘ಅಕ್ಕ ಪಡೆ’ ಬೆಂಗಳೂರಿನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ತನ್ನ ಅದ್ಭುತ ಕರಾಟೆ ಹಾಗೂ ಸ್ವಯಂರಕ್ಷಣಾ ಕೌಶಲ್ಯ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕ ಪಡೆಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಶಿಸ್ತುಬದ್ಧವಾಗಿ ನೀಡಿದ ಕರಾಟೆ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅತ್ಯುತ್ತಮ ಪ್ರದರ್ಶನಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಬಹುಮಾನ ಪಡೆದು ಗೌರವಿಸಲಾಯಿತು.

ಬೀದರ್ ಜಿಲ್ಲೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ‘ಅಕ್ಕ ಪಡೆ’ಯನ್ನು ರಚಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ರೀತಿಯ ಆತಂಕ ಎದುರಾದಾಗ ತಕ್ಷಣ ನೆರವು ನೀಡುವ ಜೊತೆಗೆ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಪಡೆ ಮಾಡುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸುರಕ್ಷತೆಗಾಗಿ 24×7 ಕಾರ್ಯನಿರ್ವಹಿಸುತ್ತಿರುವ ಅಕ್ಕ ಪಡೆ, ‘ನಿಮ್ಮ ಸುರಕ್ಷತೆಗಾಗಿ ನಾವು ಸದಾ ನಿಮ್ಮೊಂದಿಗೆ ಇದ್ದೇವೆ, ಭಯಪಡುವ ಅಗತ್ಯವಿಲ್ಲ’ ಎಂಬ ಸಕಾರಾತ್ಮಕ ಭಾವನೆಯನ್ನು ಜನರಲ್ಲಿ ಮೂಡಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.
ಅಕ್ಕ ಪಡೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಟ್ಟದ ಯೋಜನಾ ಸಲಹೆಗಾರರಾದ ಡಾ. ಶೈನಿ ಪ್ರದೀಪ್ ಗುಂಟಿ ಅವರು ವಿಶೇಷ ಮುತುವರ್ಜಿ ವಹಿಸಿ, ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ವಯಂರಕ್ಷಣಾ ಹಾಗೂ ಅಪಾಯದಿಂದ ಸುರಕ್ಷಿತವಾಗಿ ಪಾರಾಗುವ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಹಿಳೆಯರು, ಮಕ್ಕಳು ಅಥವಾ ಸಿಬ್ಬಂದಿಯೇ ಯಾವುದೇ ಆಪತ್ತಿನಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಅಪಾಯದಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಅಗತ್ಯ ಸಂದರ್ಭದಲ್ಲಿ ಸ್ವಯಂರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿದೆ. ಈ ತರಬೇತಿಯ ಪರಿಣಾಮವಾಗಿ ಅಕ್ಕ ಪಡೆಯ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ, ಶಿಸ್ತು, ಧೈರ್ಯ ಮತ್ತು ಸ್ವಯಂರಕ್ಷಣಾ ಕೌಶಲ್ಯ ಮತ್ತಷ್ಟು ಹೆಚ್ಚಾಗಿದೆ.
ಇದೇ ಕೌಶಲ್ಯವನ್ನು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಕ್ಕ ಪಡೆಯ ತಂಡ ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿತು. ಕರಾಟೆ ಪ್ರದರ್ಶನದ ವೇಳೆ ತಂಡದ ಸದಸ್ಯರು ತೋರಿದ ಶಿಸ್ತು, ಸಮನ್ವಯ, ವೇಗ ಹಾಗೂ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಅತ್ಯುತ್ತಮ ಕರಾಟೆ ಪ್ರದರ್ಶನ ನೀಡಿದ ಅಕ್ಕ ಪಡೆಯ ತಂಡಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹುಮಾನ ವಿತರಿಸಿ ಗೌರವಿಸಿದರು. ಸಂಗೀತಾ, ಎಎಸ್‌ಐ ಅವರ ನೇತೃತ್ವದಲ್ಲಿ ಅಕ್ಕ ಪಡೆಯ ತಂಡ ಈ ವಿಶೇಷ ಪ್ರದರ್ಶನ ನೀಡಿದ್ದು, ಬೀದರ್ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣವಾಗಿದೆ.


