ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಾಳೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿದೆ.ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಫ್ರೀಡಂ ಹಬ್ಬಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ.ವಾಹನಗಳ ಸುಗಮ ಸಂಚಾರಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದ್ದು, ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.ಫ್ರೀಡಂ ಹಬ್ಬದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಭದ್ರತೆ ಹಾಗೂ ಸಂಚಾರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಾರ್ಯಕ್ರಮದ ವೇಳೆ ಯಾವುದೇ ರೀತಿಯ ಸಂಚಾರ ಸಮಸ್ಯೆ ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ವಾಹನ ಸವಾರರು ಅನಗತ್ಯವಾಗಿ ಕಾರ್ಯಕ್ರಮದ ಸುತ್ತಮುತ್ತ ಸಂಚರಿಸುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಯಾವುದೇ ಅಡಚಣೆಯಾಗದಂತೆ, ಸಾರ್ವಜನಿಕರ ಸುಗಮ ಸಂಚಾರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.

ಅಂಬೇಡ್ಕರ್ ರಸ್ತೆಯಿಂದ ಬರುವ ವಾಹನಗಳು…
ಬಾಳೆಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್ಹ್ಯಾಮ್ ರಸ್ತೆಯ ಮೂಲಕ ಚಂದ್ರಿಕಾ ಬಳಿ ಎಡತಿರುವು ಪಡೆದು, ಎಲ್.ಆರ್.ಡಿ.ಇ., ಬಸವೇಶ್ವರ ಜಂಕ್ಷನ್ ಹಾಗೂ ಪ್ಯಾಲೇಸ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ತಲುಪಬಹುದು.ಇನ್ನೊಂದು ಪರ್ಯಾಯ ಮಾರ್ಗವಾಗಿ ಬಾಳೆಕುಂದ್ರಿ ಜಂಕ್ಷನ್‌ನಿಂದ ಸಿಟಿಓ, ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್. ಹಾಗೂ ಕಾರ್ಪೊರೇಷನ್ ಸರ್ಕಲ್ ಮೂಲಕ ಸಂಚರಿಸಬಹುದು.
ಬಿ.ಆರ್.ವಿ. ಕಡೆಯಿಂದ ಬರುವ ವಾಹನಗಳು…
ಅನಿಲ್ ಕುಂಬ್ಳೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್. ಹಾಗೂ ಕಾರ್ಪೊರೇಷನ್ ಸರ್ಕಲ್ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ತೆರಳಬಹುದು.ಇನ್ನು ಬಿ.ಆರ್.ವಿ. ಕಡೆಯಿಂದ ಬರುವ ವಾಹನಗಳು ರಾಜಭವನ ರಸ್ತೆಯ ಮೂಲಕ ಚಾಲುಕ್ಯ ಸರ್ಕಲ್‌ನಲ್ಲಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ಕೆ.ಆರ್. ಸರ್ಕಲ್‌ನಿಂದ ಶಿವಾಜಿನಗರ ಹಾಗೂ ವಸಂತನಗರ ಕಡೆಗೆ ಹೋಗುವ ವಾಹನಗಳು…
ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಅಥವಾ ವಸಂತನಗರ ಕಡೆಗೆ ಸಂಚರಿಸಬಹುದಾಗಿದೆ.ಮಹಾರಾಣಿ ಮೇಲ್ಸೇತುವೆ ಬಳಿ ಎಡತಿರುವು ಪಡೆದು, ಪ್ಯಾಲೇಸ್ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್ ತಲುಪಿ ಅಲ್ಲಿಂದ ವಸಂತನಗರ ಅಥವಾ ಶಿವಾಜಿನಗರ ಕಡೆಗೆ ತೆರಳಬಹುದು.ಇನ್ನೊಂದು ಮಾರ್ಗವಾಗಿ ಕೆ.ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯ ಮೂಲಕ ಕಾರ್ಪೊರೇಷನ್ ಸರ್ಕಲ್ ತಲುಪಿ, ಕೆ.ಬಿ. ರಸ್ತೆಯ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿದೆ.
ಮೆಟ್ರೋ ಪ್ರಯಾಣಿಕರಿಗೂ ಪರ್ಯಾಯ ವ್ಯವಸ್ಥೆ!
ಇನ್ನು ವಿಧಾನಸೌಧದ ಬಳಿ ನಡೆಯುವ ಫ್ರೀಡಂ ಹಬ್ಬಕ್ಕೆ ಮೆಟ್ರೋ ಮೂಲಕ ಆಗಮಿಸುವ ಸಾರ್ವಜನಿಕರು ಗಮನಿಸಬೇಕಾದ ಮಹತ್ವದ ಮಾಹಿತಿ ಇದೆ.ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೆಟ್ರೋ ಹಾಗೂ ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.ಹೀಗಾಗಿ ಫ್ರೀಡಂ ಹಬ್ಬಕ್ಕೆ ಆಗಮಿಸುವ ಸಾರ್ವಜನಿಕರು ಕಬ್ಬನ್ ಪಾರ್ಕ್ ಮೆಟ್ರೋ ಹಾಗೂ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳನ್ನು ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸುವಂತೆ ಸೂಚಿಸಲಾಗಿದೆ.ಫ್ರೀಡಂ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಕ್ವೀನ್ಸ್ ರಸ್ತೆಯಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ.
ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಹಾಗೂ ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸುವಂತಿಲ್ಲ.ಲೋಕಭವನ ರಸ್ತೆ, ಟಿ. ಚೌಡಯ್ಯ ರಸ್ತೆ ಹಾಗೂ ರೇಸ್‌ಕೋರ್ಸ್ ರಸ್ತೆಗಳಲ್ಲೂ ಪಾರ್ಕಿಂಗ್ ನಿಷೇಧಿಸಲಾಗಿದೆ.ಇನ್ನು ಕಬ್ಬನ್‌ಪಾರ್ಕ್‌ನ ಕಿಂಗ್ ಸರ್ಕಲ್ ಹಾಗೂ ಪ್ರೆಸ್‌ಕ್ಲಬ್ ಮುಂಭಾಗದಲ್ಲೂ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.ಹೀಗಾಗಿ ಫ್ರೀಡಂ ಹಬ್ಬಕ್ಕೆ ಬರುವ ಸಾರ್ವಜನಿಕರು ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲ್ಲಿಸದೆ, ಸೂಚಿಸಲಾದ ಪಾರ್ಕಿಂಗ್ ಸ್ಥಳಗಳನ್ನೇ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಫ್ರೀಡಂ ಹಬ್ಬಕ್ಕೆ ವಾಹನ ನಿಲುಗಡೆ ಸ್ಥಳಗಳು

- ಸ್ಕೌಟ್ಸ್ & ಗೈಡ್ಸ್ ಪಾರ್ಕಿಂಗ್ ಸ್ಥಳ
- ಫ್ರೀಡಂ ಪಾರ್ಕ್ ಎಂ.ಎಲ್.ಸಿ.ಪಿ. ಪಾರ್ಕಿಂಗ್ ಸ್ಥಳ
- ಕಂಠೀರವ ಕ್ರೀಡಾಂಗಣ
- ಯುನಿವರ್ಸಿಟಿ ಪಾರ್ಕಿಂಗ್ – ಜ್ಞಾನಜ್ಯೋತಿ ಆಡಿಟೋರಿಯಂ ಬಳಿ
- ಸರ್ಕಾರಿ ಕಲಾ ಕಾಲೇಜು (ಗ್ಯಾಸ್ ಕಾಲೇಜು) ಪಾರ್ಕಿಂಗ್ ಸ್ಥಳ
- ಯು.ಬಿ. ಸಿಟಿ ಪಾರ್ಕಿಂಗ್
- ಶಿವಾಜಿನಗರ ಎಂ.ಎಲ್.ಸಿ.ಪಿ. ಪಾರ್ಕಿಂಗ್ ಸ್ಥಳ
- ನೆಹರೂ ತಾರಾಲಯ
- ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ
- ಲಿಂಕ್ ರಸ್ತೆ – ಚಿನ್ನಸ್ವಾಮಿ ಕ್ರೀಡಾಂಗಣ ಬಳಿ


