ದಿನಾಂಕ:03.08.2025 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಬೆಳ್ಳಾವಿ ಗ್ರಾಮದ ಬಸವರಾಜು ರವರ ಪತ್ನಿ ಲಕ್ಷ್ಮೀದೇವಿಯು ತನ್ನ ಮಗಳು ತೇಜಸ್ವಿಯನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ವಾಪಾಸ್ ಬರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಬೇಕೆಂದು ಅವರ ಗಂಡ ಬಸವರಾಜು ರವರು ದಿನಾಂಕ 04-08-2025 ರಂದು ಬೆಳ್ಳಾವಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಮೊ.ನಂ 73/2025 ಕಲಂ ಹೆಂಗಸು ಕಾಣೆ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ:07/08/2025 ರಂದು ಕೊರಟಗೆರೆ ತಾಲ್ಲೂಕು ಚಿಂಪುಗಾನಹಳ್ಳಿ ಗ್ರಾಮದ ಸಮೀಪ ರಸ್ತೆಯಲ್ಲಿ, ಮುತ್ಯಾಲಮ್ಮ ದೇವಸ್ಥಾನದ ಬಳಿ, ಹಾಗೂ ಇತರೆ ಸ್ಥಳಗಳಲ್ಲಿ ಮಾನವನ ಮೃತದೇಹದ ಅಂಗಾಂಗಳು ಬಿದ್ದಿರುವ ಬಗ್ಗೆ ಚಿಂಪುಗಾನಹಳ್ಳಿ ಗ್ರಾಮದ ವಾಸಿ ಜಗದೀಶ್ ರವರು ಕೊರಟಗೆರೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೊಲೀಸ್ ಠಾಣಾ ಮೊ.ನಂ.166/2025, ಕಲಂ: 103(1), 238 BNS ರಿತ್ಯಾ ಪ್ರಕರಣ ದಾಖಲಿಸಿರುತ್ತೆ.
ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಗೋಪಾಲ್, ಸಿ. ಶ್ರೀ ಪುರುಷೋತ್ತಮ್ ಎಂ.ಎಲ್. ಮತ್ತು ಮಧುಗಿರಿ ಉಪ ವಿಭಾಗದ ಡಿ.ಎಸ್.ಪಿ ಶ್ರೀ ಮಂಜುನಾಥ, ಕೊರಟಗೆರೆ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀ ಅನಿಲ್ ಆರ್.ಪಿ ರವರುಗಳು ಮಧುಗಿರಿ ಉಪ ವಿಭಾಗದ ನುರಿತ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಒಟ್ಟು 19 ಸ್ಥಳಗಳಲ್ಲಿ ಮಾನವ ದೇಹದ ಅಂಗಾಂಗಗಳು ಬಿದಿದ್ದು ಅಮಾನತ್ತುಪಡಿಸಿಕೊಂಡಿರುತ್ತೆ.
ಬೆಳ್ಳಾವಿ ಪೊಲೀಸ್ ಠಾಣೆಯ ಮೊ.ನಂ 73/2025 ರ ಪ್ರಕರಣದ ಪಿರ್ಯಾದುದಾರರು ಮತ್ತು ಅವರ ಕುಟುಂಬದವರನ್ನು ಕರೆಯಿಸಿದ್ದು ಅವರು ಮೃತ ದೇಹವು 42 ವರ್ಷದ ಲಕ್ಷ್ಮೀದೇವಿಯವರದ್ದಾಗಿರುತ್ತದೆ ಎಂದು ಗುರ್ತಿಸಿರುತ್ತಾರೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಸಿ.ಗೋಪಾಲ್, ಮತ್ತು ಶ್ರೀ. ಎಂ.ಎಲ್ ಪುರುಷೋತ್ತಮ್ ರವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ, ಡಿ.ಎಸ್.ಪಿ ಮಧುಗಿರಿ, ಶಿರಾ ಬಿ.ಕೆ ಶೇಖರ್, ಡಿ.ಎಸ್.ಪಿ ಶಿರಾ, ಶ್ರೀ ಚಂದ್ರಶೇಖರ್ ಕೆ.ಆರ್. ಡಿ.ಎಸ್.ಪಿ ತುಮಕೂರು. ರವರ ನೇತೃತ್ವದಲ್ಲಿ ಶ್ರೀ ಅನಿಲ್ ಆರ್.ಪಿ, ಪಿ.ಐ ಕೊರಟಗೆರೆ, ಶ್ರೀ ಸುರೇಶ್, ಪಿ.ಐ ಪಾವಗಡ, ಶ್ರೀ ಕಾಂತರೆಡ್ಡಿ ಪಿ.ಐ ಬಡವನಹಳ್ಳಿ , ಶ್ರೀ ಹನುಮಂತರಾಯಪ್ಪ ಸಿ.ಪಿ.ಐ ಮಧುಗಿರಿ, ಶ್ರೀ ಅವಿನಾಶ್ ಪಿ.ಐ ತುಮಕೂರು ನಗರ ಠಾಣೆ ರವರುಗಳನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚಿಸಿದ್ದು ಸದರಿ ತಂಡವು ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ:-
ಡಾ: ರಾಮಚಂದ್ರಯ್ಯ ಎಸ್ ಬಿನ್ ಸಿದ್ದರಾಮಯ್ಯ, 47 ವರ್ಷ, ಕುರುಬ ಜನಾಂಗ, ದಂತ ವೈದ್ಯರು, 2ನೇ ಬ್ಲಾಕ್, 4 ನೇ ಕ್ರಾಸ್ ಪ್ರತೀಕ್ಷ ಹಾಸ್ಟೆಲ್ ಹಿಂಭಾಗ, ಕುವೆಂಪು ನಗರ ತುಮಕೂರು ಟೌನ್ ಸ್ವಂತ ವಿಳಾಸ: ಹೊಂಬೈನಪಾಳ್ಯ ಶಿರಾ ಗೇಟ್, ತುಮಕೂರು ಟೌನ್
ಸತೀಶ ಕೆ ಎನ್ ಬಿನ್ ನಾರಾಯಣ ಮೂರ್ತಿ, 38 ವರ್ಷ, ವಕ್ಕಲಿಗರು ವ್ಯವಸಾಯ, ಕಲ್ಲಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ
ಕಿರಣ್ ಕೆ ಎಸ್ ಬಿನ್ ಲೇಟ್ ಸುರೇಶ್, 32 ವರ್ಷ, ವಕ್ಕಲಿಗರು, ವ್ಯವಸಾಯ, ಕಲ್ಲಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ
ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು ಅವರು ಮೃತಳನ್ನು ಕೊಲೆ ಮಾಡಿ ಸಾಕ್ಷಾಧಾರವನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಕವರ್ಗಳಲ್ಲಿ ಹಾಕಿ ಅಲ್ಲಲ್ಲಿ ಬಿಸಾಕಿರುವುದಾಗಿ ತಿಳಿದುಬಂದಿರುತ್ತದೆ.
ಕೃತ್ಯ ಬೆಳಕಿಗೆ ಬಂದ ನಂತರ ಹಗಲಿರುಳು ಶ್ರಮಿಸಿ ಮೃತದೇಹದ ವಾರಸುದಾರರನ್ನು ಹಾಗೂ ಆರೋಪಿಗಳನ್ನು ಪತ್ತೆಹಚ್ಚಲು ಶ್ರಮಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮುಕ್ತ ಕಂಠದಿಂದ ಪ್ರಶಂಸಿಸಲಾಗಿದೆ.





