ಕಲಬುರಗಿ ಜಿಲ್ಲೆಯ ಶಹಾಬಾದ್ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮನೆ ಕಳ್ಳತನ, ನೀರೆತ್ತುವ ಪಂಪ್‌ಸೆಟ್ ಹಾಗೂ ಕೇಬಲ್ ಕಳ್ಳತನ, ಕುರಿ ಕಳ್ಳತನ ಮತ್ತು ಅಟೆನ್ಷನ್ ಡೈವರ್ಷನ್ ಮೂಲಕ ಬಂಗಾರದ ಆಭರಣ ಕಳ್ಳತನ ಸೇರಿದಂತೆ ಒಟ್ಟು 9 ಪ್ರಕರಣಗಳಲ್ಲಿ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು 15 ಲಕ್ಷ 88 ಸಾವಿರ ರೂಪಾಯಿ ಮೌಲ್ಯದ ಮುದ್ದೆ ಮಾಲನ್ನು ಜಪ್ತಿ ಮಾಡಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಲ್ಲಿ ಶಹಾಬಾದ್ ಉಪವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಗೆ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು IPS ಅವರು ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಇಬ್ಬರು ಮಕ್ಕಳನ್ನು ಪೊಲೀಸರು ಕೇವಲ ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ೫೦ ಅಡಿ ರಸ್ತೆಯ ಬಾರ್‌ವೊಂದರ ಬಳಿಯ ಮನೆಯಿಂದ ಮಕ್ಕಳು ಕಾಣೆಯಾಗಿರುವ ಕುರಿತು ತಾತನವರು ನಮ್ಮ-೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದರು.
ಮಾಹಿತಿ ದೊರೆತ ತಕ್ಷಣ ನಮ್ಮ-೧೧೨ ಸಿಬ್ಬಂದಿ ಗಿರಿನಗರ ಠಾಣೆಯ ಹೊಯ್ಸಳ-೧೬೧ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಮಂಜುನಾಥ್.ಎನ್ ಹಾಗೂ ಹೆಚ್‌ಸಿ ತಿಪ್ಪೇಸ್ವಾಮಿ ಅವರಿಗೆ ಮಾಹಿತಿ ರವಾನಿಸಿದ್ದು, ಕೇವಲ ೪ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದಾಗ, ಮನೆಯ ಪಕ್ಕದ ವಾಣಿಜ್ಯ ಕಟ್ಟಡದ ಟೆರೇಸ್‌ನಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿರುವುದು ಪತ್ತೆಯಾಗಿದೆ.
ಕೂಡಲೇ ಮಕ್ಕಳನ್ನು ಸುರಕ್ಷಿತವಾಗಿ ಕೆಳಗೆ ಕರೆತಂದ ಪೊಲೀಸರು, ಇಬ್ಬರನ್ನೂ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ತಾತನ ಸಮಯೋಚಿತ ಕರೆ ಹಾಗೂ ಹೊಯ್ಸಳ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಇಬ್ಬರು ಮಕ್ಕಳು ಯಾವುದೇ ಅಪಾಯವಿಲ್ಲದೆ ಪೋಷಕರೊಂದಿಗೆ ಮತ್ತೆ ಸೇರಿದ್ದಾರೆ.ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ನಮ್ಮ-೧೧೨ಗೆ ಕರೆ ಮಾಡುವ ಮೂಲಕ ಪೊಲೀಸರ ನೆರವು ಪಡೆಯಬಹುದು.
ತಮಿಳುನಾಡು ಪೊಲೀಸ್ ಇಲಾಖೆಯ ಗಸ್ತು ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು 42 ಹೊಸ ಮಹೀಂದ್ರಾ ಥಾರ್ ರಾಕ್ಸ್ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಶಾಂತಿ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ಈ ಹೊಸ ಗಸ್ತು ವಾಹನಗಳನ್ನು ಒದಗಿಸಲಾಗಿದೆ.
ಆಧುನಿಕ ವಿನ್ಯಾಸ, ಉತ್ತಮ ಸಾಮರ್ಥ್ಯ ಹಾಗೂ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಸಂಚರಿಸಲು ಅನುಕೂಲವಾಗುವ ವೈಶಿಷ್ಟ್ಯಗಳನ್ನು ಹೊಂದಿರುವ ಥಾರ್ ರಾಕ್ಸ್ ವಾಹನಗಳು ಪೊಲೀಸ್ ಗಸ್ತು ಕಾರ್ಯಾಚರಣೆಗಳಿಗೆ ನೆರವಾಗಲಿವೆ. ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ವೇಗವಾಗಿ ಸ್ಥಳಕ್ಕೆ ತಲುಪಲು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಗಸ್ತು ನಡೆಸಲು ಈ ವಾಹನಗಳು ಸಹಕಾರಿಯಾಗಲಿವೆ.
ಅಪರಾಧ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ವೇಗವಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹೊಸ ವಾಹನಗಳ ಸೇರ್ಪಡೆ ಮಹತ್ವ ಪಡೆದಿದೆ. ಪ್ರಮುಖ ಪ್ರದೇಶಗಳು, ಹೆದ್ದಾರಿಗಳು ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ಈ ವಾಹನಗಳನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.
42 ಹೊಸ ಥಾರ್ ರಾಕ್ಸ್ ವಾಹನಗಳು ಪೊಲೀಸ್ ಇಲಾಖೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ತುರ್ತು ಕರೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಿಬ್ಬಂದಿಗೆ ನೆರವಾಗಲಿವೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಲು ಈ ವಾಹನಗಳು ಉಪಯುಕ್ತವಾಗಲಿವೆ.
ಹೊಸ ಗಸ್ತು ವಾಹನಗಳ ಸೇರ್ಪಡೆಯಿಂದ ತಮಿಳುನಾಡು ಪೊಲೀಸ್ ಇಲಾಖೆಯ ಮೊಬೈಲ್ ಪೆಟ್ರೋಲಿಂಗ್ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಅಪರಾಧ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ನಡೆಯುವ ಕಾರ್ಯಾಚರಣೆಗಳಿಗೆ ಹೊಸ ವೇಗ ಸಿಗುವ ನಿರೀಕ್ಷೆಯಿದೆ. ಆಧುನಿಕ ವಾಹನಗಳ ಬಳಕೆಯ ಮೂಲಕ ಪೊಲೀಸ್ ಸಿಬ್ಬಂದಿಯ ಗಸ್ತು ಕಾರ್ಯ ಇನ್ನಷ್ಟು ಪರಿಣಾಮಕಾರಿ ಹಾಗೂ ತ್ವರಿತವಾಗಲಿದೆ.
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಬ್ ಬೀಟ್ ಮೀಟಿಂಗ್ ನಡೆಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು. ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಯಿತು. ಮೊಬೈಲ್ ಸ್ನಾಚಿಂಗ್ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸುವಂತೆ ಹಾಗೂ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡುವಂತೆ ತಿಳಿಸಲಾಯಿತು.
ಇದೇ ವೇಳೆ KSP Appನಲ್ಲಿ ಲಭ್ಯವಿರುವ ವಿವಿಧ ಪೊಲೀಸ್ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು. ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, OTP, PIN, CVV, ಬ್ಯಾಂಕ್ ಖಾತೆ ವಿವರಗಳು ಹಾಗೂ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಹಾಗೂ ಅಪರಿಚಿತ APK ಅಥವಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸೂಚಿಸಲಾಯಿತು. ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ತಿಳಿಸಲಾಯಿತು.
ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಾಟ, ಬಳಕೆ ಅಥವಾ ಸಂಗ್ರಹಣೆ ಕುರಿತು ಮಾಹಿತಿ ದೊರೆತಲ್ಲಿ Drug-Free Karnataka ಮೂಲಕ ವರದಿ ಮಾಡುವಂತೆ ಮನವಿ ಮಾಡಲಾಯಿತು. ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸುವಂತೆ ಹಾಗೂ ಯುವಜನರನ್ನು ಮಾದಕ ವಸ್ತುಗಳಿಂದ ದೂರವಿಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಲಾಯಿತು.
ಬೀದರ್ ಜಿಲ್ಲಾ ಪೊಲೀಸರ ಹೆಮ್ಮೆಯ ‘ಅಕ್ಕ ಪಡೆ’ ಬೆಂಗಳೂರಿನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ತನ್ನ ಅದ್ಭುತ ಕರಾಟೆ ಹಾಗೂ ಸ್ವಯಂರಕ್ಷಣಾ ಕೌಶಲ್ಯ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕ ಪಡೆಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಶಿಸ್ತುಬದ್ಧವಾಗಿ ನೀಡಿದ ಕರಾಟೆ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅತ್ಯುತ್ತಮ ಪ್ರದರ್ಶನಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಬಹುಮಾನ ಪಡೆದು ಗೌರವಿಸಲಾಯಿತು.
ಬೀದರ್ ಜಿಲ್ಲೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ‘ಅಕ್ಕ ಪಡೆ’ಯನ್ನು ರಚಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ರೀತಿಯ ಆತಂಕ ಎದುರಾದಾಗ ತಕ್ಷಣ ನೆರವು ನೀಡುವ ಜೊತೆಗೆ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಪಡೆ ಮಾಡುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸುರಕ್ಷತೆಗಾಗಿ 24×7 ಕಾರ್ಯನಿರ್ವಹಿಸುತ್ತಿರುವ ಅಕ್ಕ ಪಡೆ, ‘ನಿಮ್ಮ ಸುರಕ್ಷತೆಗಾಗಿ ನಾವು ಸದಾ ನಿಮ್ಮೊಂದಿಗೆ ಇದ್ದೇವೆ, ಭಯಪಡುವ ಅಗತ್ಯವಿಲ್ಲ’ ಎಂಬ ಸಕಾರಾತ್ಮಕ ಭಾವನೆಯನ್ನು ಜನರಲ್ಲಿ ಮೂಡಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.
ಅಕ್ಕ ಪಡೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಟ್ಟದ ಯೋಜನಾ ಸಲಹೆಗಾರರಾದ ಡಾ. ಶೈನಿ ಪ್ರದೀಪ್ ಗುಂಟಿ ಅವರು ವಿಶೇಷ ಮುತುವರ್ಜಿ ವಹಿಸಿ, ಅಕ್ಕ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ವಯಂರಕ್ಷಣಾ ಹಾಗೂ ಅಪಾಯದಿಂದ ಸುರಕ್ಷಿತವಾಗಿ ಪಾರಾಗುವ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಹಿಳೆಯರು, ಮಕ್ಕಳು ಅಥವಾ ಸಿಬ್ಬಂದಿಯೇ ಯಾವುದೇ ಆಪತ್ತಿನಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಅಪಾಯದಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಅಗತ್ಯ ಸಂದರ್ಭದಲ್ಲಿ ಸ್ವಯಂರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿದೆ. ಈ ತರಬೇತಿಯ ಪರಿಣಾಮವಾಗಿ ಅಕ್ಕ ಪಡೆಯ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ, ಶಿಸ್ತು, ಧೈರ್ಯ ಮತ್ತು ಸ್ವಯಂರಕ್ಷಣಾ ಕೌಶಲ್ಯ ಮತ್ತಷ್ಟು ಹೆಚ್ಚಾಗಿದೆ.
ಇದೇ ಕೌಶಲ್ಯವನ್ನು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಕ್ಕ ಪಡೆಯ ತಂಡ ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿತು. ಕರಾಟೆ ಪ್ರದರ್ಶನದ ವೇಳೆ ತಂಡದ ಸದಸ್ಯರು ತೋರಿದ ಶಿಸ್ತು, ಸಮನ್ವಯ, ವೇಗ ಹಾಗೂ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಅತ್ಯುತ್ತಮ ಕರಾಟೆ ಪ್ರದರ್ಶನ ನೀಡಿದ ಅಕ್ಕ ಪಡೆಯ ತಂಡಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹುಮಾನ ವಿತರಿಸಿ ಗೌರವಿಸಿದರು. ಸಂಗೀತಾ, ಎಎಸ್‌ಐ ಅವರ ನೇತೃತ್ವದಲ್ಲಿ ಅಕ್ಕ ಪಡೆಯ ತಂಡ ಈ ವಿಶೇಷ ಪ್ರದರ್ಶನ ನೀಡಿದ್ದು, ಬೀದರ್ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣವಾಗಿದೆ.
ಬೆಂಗಳೂರು ಆಗ್ನೇಯ ವಿಭಾಗದ ಅಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಿಸಿದ ದೂರುದಾರರಿಗೆ ಪೊಲೀಸರು ಮರಳಿಸಿದ್ದಾರೆ.
ಮೊಬೈಲ್ ಫೋನ್ ಕಳೆದುಹೋದ ಸಂದರ್ಭದಲ್ಲಿ ಸಾರ್ವಜನಿಕರು KSP ಆಪ್‌ನ E-Lost ಸೇವೆಯ ಮೂಲಕ ದೂರು ದಾಖಲಿಸಬೇಕು. ನಂತರ CEIR ಪೋರ್ಟಲ್‌ನಲ್ಲಿ ಮೊಬೈಲ್‌ನ IMEI ವಿವರಗಳನ್ನು ದಾಖಲಿಸಿ ಆನ್‌ಲೈನ್ ಮೂಲಕ ದೂರು ನೀಡಬೇಕು. ಇದರಿಂದ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಹಾಗೂ ಅವುಗಳ ದುರುಪಯೋಗವನ್ನು ತಡೆಯಲು ಪೊಲೀಸರಿಗೆ ಸಹಕಾರಿಯಾಗಲಿದೆ.
ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆ, ಜಾತ್ರೆ ಹಾಗೂ ಜನನಿಬಿಡ ಪ್ರದೇಶಗಳಿಗೆ ತೆರಳುವಾಗ ಸಾರ್ವಜನಿಕರು ಮೊಬೈಲ್ ಫೋನ್‌ಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಳೆದುಹೋದ ಮೊಬೈಲ್ ಪತ್ತೆ ಕಾರ್ಯದಲ್ಲಿ CEIR ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಮೊಬೈಲ್ ಕಳೆದುಹೋದ ಕೂಡಲೇ E-Lost ಹಾಗೂ CEIR ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಸ್ವತ್ತಿನ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ಭರ್ಜರಿ ಸಾಧನೆ ಮಾಡಿದ್ದಾರೆ. 2025ರ ಆಗಸ್ಟ್ 1ರಿಂದ 2026ರ ಜುಲೈ 31ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ 74 ಪ್ರಕರಣಗಳನ್ನು ಭೇದಿಸಿ 111 ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರ ಮಾಡಲಾಗಿದೆ.
ಆರೋಪಿತರಿಂದ 1.73 ಕೆಜಿ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 1 ಕೋಟಿ 65 ಲಕ್ಷ ರೂಪಾಯಿ. ಜೊತೆಗೆ 37 ಕೆಜಿ ಬೆಳ್ಳಿ, 60.50 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು, 7.98 ಲಕ್ಷ ರೂಪಾಯಿ ನಗದು ಹಾಗೂ 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಅಂದಾಜು ಮೌಲ್ಯ 17.13 ಲಕ್ಷ ರೂಪಾಯಿ ಆಗಿದೆ.
ಇದೇ ವೇಳೆ ಮೋಸ, ವಂಚನೆ ಸೇರಿದಂತೆ ಇತರೆ 27 ಪ್ರಕರಣಗಳಲ್ಲಿ 35 ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರ ಮಾಡಲಾಗಿದ್ದು, ಒಟ್ಟು 37.14 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಮೊಬೈಲ್ ಕಳ್ಳತನ ಹಾಗೂ ನಾಪತ್ತೆ ಪ್ರಕರಣಗಳಲ್ಲೂ ಗದಗ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ. CEIR ಪೋರ್ಟಲ್ ಮೂಲಕ ದಾಖಲಾಗಿದ್ದ 1,440 ಪ್ರಕರಣಗಳಲ್ಲಿ 965 ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಪತ್ತೆಯಾದ ಮೊಬೈಲ್‌ಗಳ ಅಂದಾಜು ಮೌಲ್ಯ 97.19 ಲಕ್ಷ ರೂಪಾಯಿ.
ಒಟ್ಟಾರೆ 1,576 ಪ್ರಕರಣಗಳಲ್ಲಿ ಬರೋಬ್ಬರಿ 3 ಕೋಟಿ 68.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಪತ್ತೆ ಹಾಗೂ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 146 ಆರೋಪಿತರನ್ನು ದಸ್ತಗಿರ ಮಾಡಲಾಗಿದೆ.
ಪತ್ತೆ ಹಾಗೂ ವಶಪಡಿಸಿಕೊಂಡ ಸ್ವತ್ತನ್ನು ಆಗಸ್ಟ್ 17ರಂದು ಗದಗ ಜಿಲ್ಲಾ ಪೊಲೀಸ್ ಸಭಾ ಭವನದಲ್ಲಿ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್, IPS ಅವರು ಫಿರ್ಯಾದಿದಾರರಿಗೆ ಹಸ್ತಾಂತರಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಈ ಮಹತ್ವದ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್, IPS ಅವರು ಶ್ಲಾಘಿಸಿ ಅಭಿನಂದಿಸಿದರು.
ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್ ಬಿ.ಜಿ.ರೋಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಆಗಸ್ಟ್ 16ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಸಿಗ್ನಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಪಿಸಿ 18249 ಅರುಣ್ ಮಂಜಪ್ಪ ಬಡಗೌಡ್ರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಯಿಂದ ಮುಖಕ್ಕೆ ಡಿಕ್ಕಿ ಹೊಡೆದು, ಕೈಯಿಂದ ಗುದ್ದಿ ಗಾಯಗೊಳಿಸಲಾಗಿತ್ತು. ಅಲ್ಲದೇ ಕಾಲಿನಿಂದ ಒದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರ ಕೈಯಲ್ಲಿದ್ದ ಮೊಬೈಲ್ ಕಿತ್ತು ನೆಲಕ್ಕೆ ಹೊಡೆದು ಹಾನಿಗೊಳಿಸಲಾಗಿತ್ತು.
ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಡಿಸಿಪಿ ನಿರ್ದೇಶನದಂತೆ ಹುಳಿಮಾವು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಆರ್. ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎ1 ಆರೋಪಿ ಮಂಜುನಾಥ್ ಸಿ. ಅಲಿಯಾಸ್ ಗೊಟ್ಟಿಗೆರೆ ಮಂಜಣ್ಣ ಎಂಬಾತನನ್ನು ಆಗಸ್ಟ್ 17ರಂದು ಹುಳಿಮಾವು ಮೀನಾಕ್ಷಿ ಮಾಲ್ ಬಳಿ ಪತ್ತೆ ಮಾಡಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಉಳಿದ ಆರೋಪಿಗಳ ಪತ್ತೆಗಾಗಿ ಬೇಗೂರು ಮತ್ತು ಬಂಡೆಪಾಳ್ಯ ಪೊಲೀಸ್ ಠಾಣೆಗಳ ಅಧಿಕಾರಿಗಳನ್ನೊಳಗೊಂಡ ಮತ್ತೊಂದು ತಂಡ ರಚಿಸಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಜೆ.ಪಿ.ನಗರ 8ನೇ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ಲಿಫ್ಟ್‌ವೊಂದರಲ್ಲಿ ತಾಂತ್ರಿಕ ದೋಷ ಉಂಟಾಗಿ ಒಂದೇ ಕುಟುಂಬದ ಮೂವರು ಸಿಲುಕಿಕೊಂಡಿದ್ದರು.ಲಿಫ್ಟ್‌ನಲ್ಲಿ ಸಿಲುಕಿದ್ದವರ ಪೈಕಿ ಓರ್ವರು ಪೊಲೀಸರ ಸಹಾಯ ಕೋರಿದ್ದು, ಕೂಡಲೇ ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಮಾಹಿತಿ ಪಡೆದ 112 ಸಿಬ್ಬಂದಿ, ತಲಘಟ್ಟಪುರ ಪೊಲೀಸ್ ಠಾಣೆಯ ಹೊಯ್ಸಳ-158ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಪ್ರಕಾಶ್ ಎಲ್. ಹಾಗೂ ಪಿಸಿ ಸಂಜೀವ್ ಕುಮಾರ್ ಎಂ.ಡಿ. ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ, ಪರಿಸ್ಥಿತಿಯನ್ನು ಪರಿಶೀಲಿಸಿ ಅಪಾರ್ಟ್‌ಮೆಂಟ್ ನಿರ್ವಹಣಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದ್ದಾರೆ.
ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಲಿಫ್ಟ್‌ನ್ನು ಸುರಕ್ಷಿತವಾಗಿ ತೆರೆಯುವ ಮೂಲಕ ಒಳಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ನಗರ ಪೊಲೀಸರ ತ್ವರಿತ ಸ್ಪಂದನೆ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ಈ ಘಟನೆ ಸಾಕ್ಷಿಯಾಗಿದೆ.
ಹೊಯ್ಸಳ-158 ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಮತ್ತು ಅಪಾರ್ಟ್‌ಮೆಂಟ್ ನಿರ್ವಹಣಾ ಸಿಬ್ಬಂದಿಯ ಸಹಕಾರದಿಂದ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ನಮ್ಮ-112 ತುರ್ತು ಸ್ಪಂದನಾ ವ್ಯವಸ್ಥೆಯ ಮೂಲಕ ತ್ವರಿತವಾಗಿ ನೆರವು ಒದಗಿಸುವ ಮೂಲಕ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಪಾಕಿಸ್ತಾನ ಸೇನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಆಗಸ್ಟ್ 11ರಂದು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಶ್ಚಿಮ ಬಂಗಾಳ ಮೂಲದ 25 ವರ್ಷದ ಅಸಾಫೂಲ್ ಮಲ್ಲಿಕ್ ಬಿನ್ ಅಬೆದ್ ಮಲ್ಲಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜಿಗಣಿಯಲ್ಲಿ ವಾಸವಾಗಿದ್ದ ಆರೋಪಿಯು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಅಫ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನ ಮೂಲಕ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿಕೊಂಡು, ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ಘಾನಿಸ್ತಾನಕ್ಕೆ ತೆರಳಲು ಆರೋಪಿ ಪಾಸ್‌ಪೋರ್ಟ್ ಮಾಡಿಸಿಕೊಂಡು ವೀಸಾಗೂ ಅರ್ಜಿ ಸಲ್ಲಿಸಿದ್ದ. ಆದರೆ ಕಾರಣಾಂತರಗಳಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶಕ್ಕೆ ಸಂಬಂಧಿಸಿದ ಸಂದೇಶಗಳು ಹಾಗೂ ಆಡಿಯೋ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
ಡಿಸಿಪಿ ನಾರಾಯಣ್ ಎಂ. ಐಪಿಎಸ್ ಮಾರ್ಗದರ್ಶನದಲ್ಲಿ, ಎಸಿಪಿ ಸತೀಶ್ ಕೆ.ಎಂ. ಕೆಎಸ್‌ಪಿಎಸ್ ನೇತೃತ್ವದಲ್ಲಿ, ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸೋಮಶೇಖರ್ ಜಿ., ಪಿಎಸ್‌ಐ ಶ್ರೀಕಾಂತ್ ನಾಯ್ಕರ್, ಪಿಎಸ್‌ಐ ಅಯ್ಯಪ್ಪ ಆರ್.ವಿ., ಎಎಸ್‌ಐ ಮಹಾಂತಗೌಡ ಹಾಗೂ ಸಿಬ್ಬಂದಿಗಳಾದ ಮೋಹನ್ ಕೆ.ಕೆ., ವೃಷಭೇಂದ್ರ, ಸಂತೋಷ್, ಪ್ರವೀಣ್, ವೇಣುಗೋಪಾಲ್, ನಾಗೇಶ್, ಅಶೋಕ್ ತಳಗೇರಿ ಮತ್ತು ಆನಂದ್ ಅವರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.