ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೇಶದ ವಿವಿಧ ಸೇವಾ ಪಡೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೇಂದ್ರ ಸರ್ಕಾರ ಪದಕಗಳನ್ನು ಘೋಷಿಸಿದೆ.ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಸೇರಿದಂತೆ ವಿವಿಧ ಘಟಕಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಮತ್ತು ಶ್ಲಾಘನೀಯ ಸೇವೆಯನ್ನು ಗುರುತಿಸಿ ಪದಕಗಳನ್ನು ನೀಡಲಾಗುತ್ತಿದೆ.ದೇಶಾದ್ಯಂತ ಶೌರ್ಯ ಪದಕ ಸೇರಿದಂತೆ ಒಟ್ಟು 1057 ಅಧಿಕಾರಿ ಹಾಗೂ ಸಿಬ್ಬಂದಿಗೆ ಪದಕ ಘೋಷಿಸಲಾಗಿದೆ.
ಕರ್ನಾಟಕದಲ್ಲೂ ಪೊಲೀಸ್ ಇಲಾಖೆಯ ಹಲವು ಅಧಿಕಾರಿ ಹಾಗೂ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ಎಡಿಜಿಪಿ, ಸಿಐಡಿ, ಬೆಂಗಳೂರು ನಗರದ ಎಚ್.ಎನ್. ಧರ್ಮೇಂದ್ರ ಅವರು ಆಯ್ಕೆಯಾಗಿದ್ದಾರೆ.

ಇನ್ನು ಶ್ಲಾಘನೀಯ ಸೇವೆಗಾಗಿ ನೀಡುವ ಪದಕಕ್ಕೆ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯ್ಕೆಯಾಗಿದ್ದಾರೆ.ರೈಲ್ವೇಸ್, ಬೆಂಗಳೂರು ಪೊಲೀಸ್ ಅಧೀಕ್ಷಕರಾಗಿರುವ ಸಾರಾ ಫಾತಿಮಾ, ಐಪಿಎಸ್, 9ನೇ ಪಡೆ ಕೆಎಸ್‌ಆರ್‌ಪಿ, ಬೆಂಗಳೂರಿನ ಪಿಎಂ ಕಮಾಂಡೆಂಟ್ ಥಾಮಸ್ ಮ್ಯಾಥ್ಯೂ ಹಾಗೂ ಆಗ್ನೇಯ ಸಂಚಾರ ಉಪ ವಿಭಾಗದ ಎಸಿಪಿ ಟಿ. ಮಹಾದೇವ ಅವರು ಪದಕಕ್ಕೆ ಭಾಜನರಾಗಿದ್ದಾರೆ.
ಮುಂದುವರಿದು ಸಿಐಡಿ ಪೊಲೀಸ್ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಗೋಪಾಲ ನಾಯಕ್, ಲೋಕಭವನದ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ನಯೀಮ್ ಎಂ., ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀನಿವಾಸ ಎಂ. ಹಾಗೂ ವಿಧಾನಸೌಧ ಭದ್ರತೆಯ ಮಹಾದೇವಸ್ವಾಮಿ ಅವರಿಗೂ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ.

ಡಿಆರ್‌ಬಿ ಕೆಜಿಎಫ್‌ನ ಮಾರಿಯ ಜೋಸೆಫ್ ದಿನೇಶ್ ಕುಮಾರ್, ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾವುದ್ದೀನ್ ರುಕುಮುದ್ದೀನ್ ಗಡ್ಡೇಕರ, ರಾಯಚೂರಿನ ಡಿಎಆರ್‌ನ ಡಿವೈಎಸ್‌ಪಿ ಪ್ರಮಾಣಂದ ಪಿ. ಘೋಡೆ, ಮೈಸೂರಿನ ಪೊಲೀಸ್ ತರಬೇತಿ ಶಾಲೆಯ ಇನ್ಸ್‌ಪೆಕ್ಟರ್ ಕೆ. ಷಣ್ಮುಗ ವರ್ಮಾ ಹಾಗೂ ಕೆಎಸ್‌ಆರ್‌ಪಿಯ 3ನೇ ಪಡೆಯ ಜ್ಞಾನ ದೇವ್ ನವಲ ತರಾಸೆ ಅವರಿಗೂ ಪದಕ ಘೋಷಿಸಲಾಗಿದೆ.
ಇದೇ ಸಾಲಿನಲ್ಲಿ ಕೆಎಸ್‌ಆರ್‌ಪಿಯ 4ನೇ ಪಡೆಯ ಚಂದ್ರಶೇಖರ್ ಜಿ. ಚಿಕ್ಕಣ್ಣನವರ್, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಉಪ ವಿಭಾಗದ ಅಬ್ದುಲ್ ಕಮಾಲ್ ಅಬ್ದುಲ್ ಹಮೀದ್, ಮೈಸೂರು ಜಿಲ್ಲೆಯ ಹುಣಸೂರು ಟೌನ್ ಪೊಲೀಸ್ ಠಾಣೆಯ ಎಸ್.ಎ. ಮನೋಹರ, ಚಿಕ್ಕಮಗಳೂರು ಜಿಲ್ಲೆಯ ಡಿಪಿಒನ ಅಬ್ದುಲ್ ರಬ್ಬಾನಿ ಹಾಗೂ ಬೆಂಗಳೂರಿನ ಸಿಐಡಿಯ ನಾಗೇಶ್ ಮಂಚಯ್ಯ ಅವರಿಗೂ ಶ್ಲಾಘನೀಯ ಸೇವಾ ಪದಕ ನೀಡಲಾಗುತ್ತಿದೆ.

ಕರ್ತವ್ಯದಲ್ಲಿ ತೋರಿದ ವಿಶಿಷ್ಟ ಮತ್ತು ಶ್ಲಾಘನೀಯ ಸೇವೆಗೆ ಸಿಗುತ್ತಿರುವ ಈ ಪದಕಗಳು, ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಸೇವೆಗೆ ಸಂದಿರುವ ರಾಷ್ಟ್ರಮಟ್ಟದ ಗೌರವವಾಗಿದೆ.


