Thursday, August 13th, 2026 10:07 AM
[ditty id=171]

ಪತ್ರಕರ್ತನಿಂದ ಪೊಲೀಸ್‌ ಸೇವೆ… ಇದೀಗ 4ನೇ ಪುಸ್ತಕದ ಸರದಾರ

ಒಂದು ಕಡೆ ಪತ್ರಿಕೋದ್ಯಮದ ಅನುಭವ… ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಸೇವೆ… ಈ ಎರಡೂ ಕ್ಷೇತ್ರಗಳಲ್ಲಿ ಸತತವಾಗಿ 14 ವರ್ಷಗಳ ಪಯಣ. ಇದೀಗ ಇದೇ ಅನುಭವದೊಂದಿಗೆ ಜ್ಞಾನದ ಹಂಚಿಕೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.ಅವರೇ ಅಭಿಲಾಷ್.

ಸತತ ಏಳು ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ ಅಭಿಲಾಷ್, ಬಳಿಕ ಪೊಲೀಸ್ ಇಲಾಖೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಪಿಆರ್‌ಒ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಲಾಷ್, ವೃತ್ತಿಯ ಜೊತೆಗೆ ಬರವಣಿಗೆಯನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ.ಇದೀಗ ಅವರ ಲೇಖನ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು.

‘ಕಂಪ್ಯೂಟರ್ ಜ್ಞಾನ’ ಹೆಸರಿನ ಪುಸ್ತಕವನ್ನು ಹೊರತರುತ್ತಿದ್ದು, ಇದು ಅಭಿಲಾಷ್ ಅವರ ನಾಲ್ಕನೇ ಪುಸ್ತಕ ಎನ್ನುವುದು ವಿಶೇಷ.ಕೇವಲ ಪುಸ್ತಕ ಬರೆಯುವ ಉದ್ದೇಶದಿಂದ ಈ ಕೃತಿಯನ್ನು ರೂಪಿಸಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಕಂಪ್ಯೂಟರ್ ಜ್ಞಾನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಮತ್ತು ಸಂಪೂರ್ಣವಾಗಿ ತಲುಪಿಸುವ ಉದ್ದೇಶದಿಂದ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ.

ಐದು ವರ್ಷದ ಮಗುವಿನಿಂದ ಹಿಡಿದು… ಕಂಪ್ಯೂಟರ್ ಬಗ್ಗೆ ಮೂಲಭೂತ ಜ್ಞಾನ ಪಡೆಯಲು ಬಯಸುವವರು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಹುದ್ದೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರವರೆಗೆ ಉಪಯೋಗವಾಗುವ ರೀತಿಯಲ್ಲಿ ಪುಸ್ತಕವನ್ನು ರೂಪಿಸಲಾಗಿದೆ.ಕಂಪ್ಯೂಟರ್‌ನ ಮೂಲಭೂತ ಜ್ಞಾನದಿಂದ ಹಿಡಿದು, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಬಹುದಾದ ಮಾಹಿತಿಯವರೆಗೆ ಒಂದೇ ಪುಸ್ತಕದಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ.

ಇನ್ನು ಈ ಪುಸ್ತಕದ ವಿಶೇಷತೆ ಏನೆಂದರೆ… ಪುಸ್ತಕ ಬಿಡುಗಡೆಯಾಗುವ ಮುನ್ನವೇ ಸಾವಿರಾರು ಪ್ರತಿಗಳಿಗೆ ಆರ್ಡರ್ ಬಂದಿರುವುದು.ಅಂದರೆ ಪುಸ್ತಕ ಮಾರುಕಟ್ಟೆಗೆ ಬರುವ ಮುನ್ನವೇ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅಭಿಲಾಷ್ ಅವರ ಪ್ರಯತ್ನಕ್ಕೆ ಸಿಕ್ಕಿರುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.

ಪತ್ರಕರ್ತನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಸಮಾಜದ ವಿವಿಧ ವರ್ಗಗಳ ಜನರನ್ನು ಹತ್ತಿರದಿಂದ ಕಂಡ ಅನುಭವ… ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಿದ ಅನುಭವ… ಈ ಎರಡೂ ಕ್ಷೇತ್ರಗಳ ಅನುಭವವೇ ಅವರ ಬರವಣಿಗೆಗೆ ಮತ್ತಷ್ಟು ಗಟ್ಟಿತನ ನೀಡಿದೆ.ಇದೇ ಅನುಭವದ ಪಯಣದಲ್ಲಿ ಈಗಾಗಲೇ ಮೂರು ಪುಸ್ತಕಗಳನ್ನು ಹೊರತಂದಿರುವ ಅಭಿಲಾಷ್, ಇದೀಗ ನಾಲ್ಕನೇ ಪುಸ್ತಕದ ಮೂಲಕ ಜ್ಞಾನ ಹಂಚಿಕೆಯ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಮ್ಮ 14 ವರ್ಷಗಳ ವೃತ್ತಿ ಮತ್ತು ಬರವಣಿಗೆಯ ಪಯಣದಲ್ಲಿ ಬೆನ್ನೆಲುಬಾಗಿ ನಿಂತ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ಪೊಲೀಸ್ ಇಲಾಖೆ ಹಾಗೂ ಹಿತೈಷಿಗಳಿಗೆ ಅಭಿಲಾಷ್ ಕೃತಜ್ಞತೆ ಸಲ್ಲಿಸಿದ್ದಾರೆ.ವೃತ್ತಿಯ ಜವಾಬ್ದಾರಿಗಳ ನಡುವೆಯೂ ಬರವಣಿಗೆಯ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡು, ಸಮಾಜಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಪುಸ್ತಕದ ಮೂಲಕ ತಲುಪಿಸುವ ಅಭಿಲಾಷ್ ಅವರ ಪ್ರಯತ್ನ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

Related Articles

TRENDING ARTICLES

error: Content is protected !!