ಅಪರಾಧ, ಅಪಘಾತ ತಡೆಗೆ ಐಜಿಪಿ ಮಾಸ್ಟರ್ ಪ್ಲ್ಯಾನ್

0

ವಿಜಯನಗರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಮರ್ಶನಾ ಸಭೆ ನಡೆಯಿತು.

ಐ.ಜಿ.ಪಿ. ವಿಕಾಸ್ ಕುಮಾರ್ ವಿಕಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ, ಅಪರಾಧ ನಿಯಂತ್ರಣ ಹಾಗೂ ರಸ್ತೆ ಅಪಘಾತಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಅಪರಾಧ ಪ್ರಕರಣಗಳ ಮೇಲೆ ನಿರಂತರ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಯಿತು.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಸಂಚಾರ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಇದೇ ವೇಳೆ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವಂತೆ ಸೂಚನೆ ನೀಡಲಾಯಿತು. ಸಮುದಾಯ ಪೊಲೀಸಿಂಗ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಐಜಿಪಿ ಸೂಚಿಸಿದರು.

ಸಭೆಯಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಜಿಲ್ಲೆಯ ಎಲ್ಲಾ ಡಿ.ಎಸ್.ಪಿ., ಪಿ.ಐ./ಸಿ.ಪಿ.ಐ. ಹಾಗೂ ಪಿ.ಎಸ್.ಐ.ಗಳು ಉಪಸ್ಥಿತರಿದ್ದರು.

ಪತ್ರಕರ್ತನಿಂದ ಪೊಲೀಸ್‌ ಸೇವೆ… ಇದೀಗ 4ನೇ ಪುಸ್ತಕದ ಸರದಾರ

0

ಒಂದು ಕಡೆ ಪತ್ರಿಕೋದ್ಯಮದ ಅನುಭವ… ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಸೇವೆ… ಈ ಎರಡೂ ಕ್ಷೇತ್ರಗಳಲ್ಲಿ ಸತತವಾಗಿ 14 ವರ್ಷಗಳ ಪಯಣ. ಇದೀಗ ಇದೇ ಅನುಭವದೊಂದಿಗೆ ಜ್ಞಾನದ ಹಂಚಿಕೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.ಅವರೇ ಅಭಿಲಾಷ್.

ಸತತ ಏಳು ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ ಅಭಿಲಾಷ್, ಬಳಿಕ ಪೊಲೀಸ್ ಇಲಾಖೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಪಿಆರ್‌ಒ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಲಾಷ್, ವೃತ್ತಿಯ ಜೊತೆಗೆ ಬರವಣಿಗೆಯನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ.ಇದೀಗ ಅವರ ಲೇಖನ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು.

‘ಕಂಪ್ಯೂಟರ್ ಜ್ಞಾನ’ ಹೆಸರಿನ ಪುಸ್ತಕವನ್ನು ಹೊರತರುತ್ತಿದ್ದು, ಇದು ಅಭಿಲಾಷ್ ಅವರ ನಾಲ್ಕನೇ ಪುಸ್ತಕ ಎನ್ನುವುದು ವಿಶೇಷ.ಕೇವಲ ಪುಸ್ತಕ ಬರೆಯುವ ಉದ್ದೇಶದಿಂದ ಈ ಕೃತಿಯನ್ನು ರೂಪಿಸಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಕಂಪ್ಯೂಟರ್ ಜ್ಞಾನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಮತ್ತು ಸಂಪೂರ್ಣವಾಗಿ ತಲುಪಿಸುವ ಉದ್ದೇಶದಿಂದ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ.

ಐದು ವರ್ಷದ ಮಗುವಿನಿಂದ ಹಿಡಿದು… ಕಂಪ್ಯೂಟರ್ ಬಗ್ಗೆ ಮೂಲಭೂತ ಜ್ಞಾನ ಪಡೆಯಲು ಬಯಸುವವರು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಹುದ್ದೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರವರೆಗೆ ಉಪಯೋಗವಾಗುವ ರೀತಿಯಲ್ಲಿ ಪುಸ್ತಕವನ್ನು ರೂಪಿಸಲಾಗಿದೆ.ಕಂಪ್ಯೂಟರ್‌ನ ಮೂಲಭೂತ ಜ್ಞಾನದಿಂದ ಹಿಡಿದು, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಬಹುದಾದ ಮಾಹಿತಿಯವರೆಗೆ ಒಂದೇ ಪುಸ್ತಕದಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ.

ಇನ್ನು ಈ ಪುಸ್ತಕದ ವಿಶೇಷತೆ ಏನೆಂದರೆ… ಪುಸ್ತಕ ಬಿಡುಗಡೆಯಾಗುವ ಮುನ್ನವೇ ಸಾವಿರಾರು ಪ್ರತಿಗಳಿಗೆ ಆರ್ಡರ್ ಬಂದಿರುವುದು.ಅಂದರೆ ಪುಸ್ತಕ ಮಾರುಕಟ್ಟೆಗೆ ಬರುವ ಮುನ್ನವೇ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅಭಿಲಾಷ್ ಅವರ ಪ್ರಯತ್ನಕ್ಕೆ ಸಿಕ್ಕಿರುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.

ಪತ್ರಕರ್ತನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಸಮಾಜದ ವಿವಿಧ ವರ್ಗಗಳ ಜನರನ್ನು ಹತ್ತಿರದಿಂದ ಕಂಡ ಅನುಭವ… ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಿದ ಅನುಭವ… ಈ ಎರಡೂ ಕ್ಷೇತ್ರಗಳ ಅನುಭವವೇ ಅವರ ಬರವಣಿಗೆಗೆ ಮತ್ತಷ್ಟು ಗಟ್ಟಿತನ ನೀಡಿದೆ.ಇದೇ ಅನುಭವದ ಪಯಣದಲ್ಲಿ ಈಗಾಗಲೇ ಮೂರು ಪುಸ್ತಕಗಳನ್ನು ಹೊರತಂದಿರುವ ಅಭಿಲಾಷ್, ಇದೀಗ ನಾಲ್ಕನೇ ಪುಸ್ತಕದ ಮೂಲಕ ಜ್ಞಾನ ಹಂಚಿಕೆಯ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಮ್ಮ 14 ವರ್ಷಗಳ ವೃತ್ತಿ ಮತ್ತು ಬರವಣಿಗೆಯ ಪಯಣದಲ್ಲಿ ಬೆನ್ನೆಲುಬಾಗಿ ನಿಂತ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ಪೊಲೀಸ್ ಇಲಾಖೆ ಹಾಗೂ ಹಿತೈಷಿಗಳಿಗೆ ಅಭಿಲಾಷ್ ಕೃತಜ್ಞತೆ ಸಲ್ಲಿಸಿದ್ದಾರೆ.ವೃತ್ತಿಯ ಜವಾಬ್ದಾರಿಗಳ ನಡುವೆಯೂ ಬರವಣಿಗೆಯ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡು, ಸಮಾಜಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಪುಸ್ತಕದ ಮೂಲಕ ತಲುಪಿಸುವ ಅಭಿಲಾಷ್ ಅವರ ಪ್ರಯತ್ನ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಕರ್ನಾಟಕ ಬಂದ್‌ ಬಿಸಿ: ವೈಟ್‌ಫೀಲ್ಡ್‌ನಲ್ಲಿ ಪೊಲೀಸರ ಹೈ ಅಲರ್ಟ್!

0

ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು, ರಾಜ್ಯದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ಇದರ ಜೊತೆಗೆ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು, ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳಿಗೆ ವೇಗ ನೀಡಬೇಕು ಎಂಬ ಒತ್ತಾಯವೂ ಬಂದ್‌ನ ಪ್ರಮುಖ ಬೇಡಿಕೆಗಳಲ್ಲಿದೆ. ಹೀಗಾಗಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವೈಟ್‌ಫೀಲ್ಡ್ ವಿಭಾಗದಾದ್ಯಂತ ಇಂದು ಬೆಳಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ್ ಹಾಗೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ರೌಂಡ್ಸ್ ನಡೆಸಿ, ಪ್ರಮುಖ ರಸ್ತೆಗಳು, ಜನನಿಬಿಡ ಪ್ರದೇಶಗಳು, ಸೂಕ್ಷ್ಮ ಸ್ಥಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ, ಕಾನೂನುಬಾಹಿರ ಚಟುವಟಿಕೆ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿಯ ಮೇಲೆ ಪೊಲೀಸರು ನಿರಂತರವಾಗಿ ನಿಗಾ ಇರಿಸಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇನ್ನು ಬಂದ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿ, ಸುಳ್ಳು ಸುದ್ದಿ ಅಥವಾ ಪರಿಶೀಲಿಸದ ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡದಂತೆ ಪೊಲೀಸರು ಮನವಿ ಮಾಡಿದ್ದಾರೆ.ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಒಟ್ಟಾರೆ, ಬಂದ್ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಖಜಾನೆ ಕಚೇರಿಗಳಿಗೆ ಲೋಕಾಯುಕ್ತರ ಶಾಕ್: 3 ಕಡೆ ದಿಢೀರ್ ತಪಾಸಣೆ!

0

ಬೆಂಗಳೂರು ಆ.13: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಿಂದ ಆಗಸ್ಟ್ 11ರಂದು ಬೆಂಗಳೂರಿನ ವಿವಿಧ ಖಜಾನೆ ಕಚೇರಿಗಳಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು.

ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರ ಸಲಹೆ ಮೇರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಲೋಕಾಯುಕ್ತ ಸಂಸ್ಥೆಯ ನ್ಯಾಯಾಧೀಶರು, ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡದೊಂದಿಗೆ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೇಳೆ ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲೇಶ್ವರಂನಲ್ಲಿರುವ ಉಪ ಖಜಾನೆ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಬಳಿಕ ಯಲಹಂಕದಲ್ಲಿರುವ ಉಪ ಖಜಾನಾಧಿಕಾರಿಗಳ ಕಚೇರಿಗೂ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆ ಹಾಗೂ ದಾಖಲೆಗಳನ್ನು ಪರಿಶೀಲಿಸಲಾಯಿತು.ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಟೌನ್‌ನಲ್ಲಿರುವ ಜಿಲ್ಲಾ ಖಜಾನೆ ಅಧಿಕಾರಿಗಳ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಲೋಕಾಯುಕ್ತ ಅಧಿಕಾರಿಗಳ ತಂಡವು ಕಚೇರಿಗಳಲ್ಲಿನ ದಾಖಲೆಗಳ ನಿರ್ವಹಣೆ, ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿತು.ಅರವಿಂದ್ ಎನ್.ವಿ., ಉಪನಿಬಂಧಕರು, ವಿಚಾರಣೆಗಳು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ದಿಢೀರ್ ತಪಾಸಣೆಯಲ್ಲಿ ಭಾಗವಹಿಸಿದ್ದರು.ಆಗಸ್ಟ್ 11ರಂದು ನಡೆದ ಈ ದಿಢೀರ್ ತಪಾಸಣೆಯ ಮೂಲಕ ಖಜಾನೆ ಕಚೇರಿಗಳ ಕಾರ್ಯನಿರ್ವಹಣೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಸ್ವಾತಂತ್ರ್ಯ ಹಬ್ಬಕ್ಕೆ ಹೈಅಲರ್ಟ್: ಭದ್ರತೆ, ಸಂಚಾರಕ್ಕೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

0

ಬೆಂಗಳೂರು ಆ.13: ಆಗಸ್ಟ್ 15ರಂದು ಬೆಂಗಳೂರಿನ ಐತಿಹಾಸಿಕ ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ರಾಜ್ಯದ ಮೊದಲ ಸಾರ್ವಜನಿಕ ‘ಸ್ವಾತಂತ್ರ್ಯ ಹಬ್ಬ–2026’ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸಂಚಾರ ನಿರ್ವಹಣೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪೊಲೀಸ್ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾರ್ಯಕ್ರಮದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಸಾರ್ವಜನಿಕರ ಸುಗಮ ಪ್ರವೇಶ ಮತ್ತು ನಿರ್ಗಮನ, ವಾಹನಗಳ ನಿಲುಗಡೆ, ಸಂಚಾರ ವ್ಯವಸ್ಥೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಡೆಯಲಿರುವ ಸ್ವಾತಂತ್ರ್ಯ ಹಬ್ಬದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

‘ದಿ ಪೀಪಲ್ಸ್ ಇಂಡಿಯಾ ಪೆರೇಡ್’, ವಿಧಾನಸೌಧದ ವಿಶೇಷ ಪ್ರವಾಸ, ಮಕ್ಕಳಿಗಾಗಿ ‘ಮಕ್ಕಳ ಮೇಳ’, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಚೇರಿ ಸೇರಿದಂತೆ ಹಲವು ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ಇದರ ಜೊತೆಗೆ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ಆಹಾರ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವೂ ನಡೆಯಲಿದೆ.ವಿಶೇಷವಾಗಿ ಸಂಜೆ ನಡೆಯಲಿರುವ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ ನಡೆಯಲಿರುವ ಪಟಾಕಿ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ.

ಹೀಗಾಗಿ ಈ ಅವಧಿಯಲ್ಲಿ ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ವಿಶೇಷ ಗಮನ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.ಪಾದಚಾರಿಗಳ ಸುರಕ್ಷತೆ, ತುರ್ತು ಸೇವೆಗಳಿಗೆ ಅಗತ್ಯ ವ್ಯವಸ್ಥೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಕಾರ್ಯಕ್ರಮದ ವೇಳೆ ಸಾರ್ವಜನಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಪೊಲೀಸ್ ಇಲಾಖೆ, ಜಿಬಿಎ ಸೇರಿದಂತೆ ಸಂಬಂಧಿತ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಪೊಲೀಸ್ ಇಲಾಖೆ, ಜಿಬಿಎ ಹಾಗೂ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಸ್ವಾತಂತ್ರ್ಯ ಹಬ್ಬದ ಸಂಭ್ರಮಕ್ಕೆ ಬೆಂಗಳೂರು ಸಜ್ಜಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.

CEIR ಪೋರ್ಟಲ್ ನೆರವಿನಿಂದ ಕಳೆದುಹೋದ ಮೊಬೈಲ್ ಪತ್ತೆ ಮಾಲೀಕರಿಗೆ ಮರಳಿಸಿದ ಕರ್ಗಲ್ ಪೊಲೀಸರು

0

ಶಿವಮೊಗ್ಗ, ಆ. 6: ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಅತ್ಯಾಧುನಿಕ CEIR (Central Equipment Identity Register) ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಿ ದೂರು ದಾಖಲಿಸಿದ ಹಿನ್ನೆಲೆ, ಶಿವಮೊಗ್ಗ ಜಿಲ್ಲೆಯ ಕರ್ಗಲ್ ಪೊಲೀಸ್ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೊಬೈಲ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅದರ ನೈಜ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

ಮೊಬೈಲ್ ಕಳೆದುಹೋದ ನಂತರ ಸಾರ್ವಜನಿಕರು CEIR ಪೋರ್ಟಲ್ ಮೂಲಕ ಮೊಬೈಲ್ ಅನ್ನು ಬ್ಲಾಕ್ ಮಾಡಿ ಸಂಬಂಧಪಟ್ಟ ಮಾಹಿತಿಯೊಂದಿಗೆ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕರ್ಗಲ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮೊಬೈಲ್‌ನ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ನಂತರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಪತ್ತೆಯಾದ ಮೊಬೈಲ್ ಅನ್ನು ಈ ದಿನ ಅದರ ನೈಜ ಮಾಲೀಕರಿಗೆ ಹಿಂದಿರುಗಿಸಿ ಹಸ್ತಾಂತರಿಸಲಾಯಿತು. ತಮ್ಮ ಕಳೆದುಹೋದ ಅಮೂಲ್ಯ ಮೊಬೈಲ್ ಮರಳಿ ದೊರೆತ ಹಿನ್ನೆಲೆಯಲ್ಲಿ ಮಾಲೀಕರು ಕರ್ಗಲ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಕೃತಜ್ಞತೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳವು ಹಾಗೂ ನಾಪತ್ತೆ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ CEIR ಪೋರ್ಟಲ್ ಅತ್ಯಂತ ಪರಿಣಾಮಕಾರಿ ಸಾಧನವಾಗಿ ಪರಿಣಮಿಸಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ಕೂಡಲೇ CEIR ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ, ಮೊಬೈಲ್ ಪತ್ತೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ಗಲ್ ಪೊಲೀಸ್ ಠಾಣೆಯ ಈ ಯಶಸ್ವಿ ಕಾರ್ಯಾಚರಣೆ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನಸ್ನೇಹಿ ಪೊಲೀಸ್ ಸೇವೆ ನೀಡುತ್ತಿರುವುದಕ್ಕೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.

ಪೊಲೀಸ್ ಅಭ್ಯರ್ಥಿಗಳೇ ಗಮನಿಸಿ..ದಾಖಲೆ ಪರಿಶೀಲನೆ ಪ್ರವೇಶಪತ್ರ ಬಿಡುಗಡೆ

0

ಬೆಂಗಳೂರು ಆ. 6: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ 2026ರ ಆಗಸ್ಟ್‌ 2ರಂದು ನಡೆದ ದೈಹಿಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್‌ 3ರಂದು ಪ್ರಕಟಿಸಲಾಗಿದ್ದು, ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ (Document Verification)ಗಾಗಿ ಪ್ರವೇಶಪತ್ರಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳು ತಮ್ಮ ಪ್ರವೇಶಪತ್ರಗಳನ್ನು https://cetonline.karnataka.gov.in/kea/ ವೆಬ್‌ಸೈಟ್‌ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ದಾಖಲೆ ಪರಿಶೀಲನೆಗಾಗಿ ಅಗತ್ಯವಿರುವ ಪ್ರವೇಶಪತ್ರಗಳು ಆಗಸ್ಟ್‌ 6ರಂದು ಬೆಳಿಗ್ಗೆ 10:30 ಗಂಟೆಯಿಂದ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ ಎಂದು KEA ತಿಳಿಸಿದೆ.

ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿರುವ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಅದರಲ್ಲಿ ಸೂಚಿಸಿರುವ ಎಲ್ಲಾ ಮೂಲ ದಾಖಲೆಗಳು ಹಾಗೂ ಅವುಗಳ ಸ್ವಯಂ ದೃಢೀಕೃತ (Self Attested) ಪ್ರತಿಗಳನ್ನು PDF‌ನಲ್ಲಿ ನೀಡಿರುವ ಸೂಚನೆಗಳಂತೆ ಸಿದ್ಧಪಡಿಸಿಕೊಂಡು ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.

ಬೀದಿಯಲ್ಲಿದ್ದ 90 ವರ್ಷದ ಅಜ್ಜಿಗೆ ಹೊಸ ಬದುಕು ನೀಡಿದ ಚಿಕ್ಕಮಗಳೂರು ಪೊಲೀಸರು

0

ಚಿಕ್ಕಮಗಳೂರು ಆ. 6: ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಆಶ್ರಯವಿಲ್ಲದೆ ಬಸವನಹಳ್ಳಿ ರಸ್ತೆಯಲ್ಲಿ ಏಕಾಂಗಿಯಾಗಿ ದಿನ ಕಳೆಯುತ್ತಿದ್ದ ಸುಮಾರು 90 ವರ್ಷದ ವೃದ್ಧೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ‘ಅಕ್ಕಪಡೆ’ ಸಿಬ್ಬಂದಿ ರಕ್ಷಿಸಿ, ಸುರಕ್ಷಿತವಾಗಿ ಅನ್ನಪೂರ್ಣ ವೃದ್ಧಾಶ್ರಮಕ್ಕೆ ದಾಖಲಿಸುವ ಮೂಲಕ ಮಾನವೀಯ ಸೇವೆಯ ಮಾದರಿಯಾಗಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ವಯೋವೃದ್ಧೆಯೊಬ್ಬರು ಹಲವು ಗಂಟೆಗಳ ಕಾಲ ಅನಾಥ ಸ್ಥಿತಿಯಲ್ಲಿ ಕುಳಿತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ದೊರೆಯುತ್ತಿದ್ದಂತೆಯೇ ‘ಅಕ್ಕಪಡೆ’ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ವೃದ್ಧೆಯ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಶೀಲಿಸಿದರು. ತೀವ್ರ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತಮ್ಮ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.

ವೃದ್ಧೆಗೆ ತಕ್ಷಣವೇ ಆಹಾರ ಹಾಗೂ ಅಗತ್ಯ ನೆರವು ಒದಗಿಸಿದ ಸಿಬ್ಬಂದಿ, ಅವರನ್ನು ಅಲ್ಲಿಯೇ ಬಿಟ್ಟು ಹೋಗದೆ ಹೆಚ್ಚಿನ ಆರೈಕೆಯ ಅಗತ್ಯವಿರುವುದನ್ನು ಮನಗಂಡು, ಅನ್ನಪೂರ್ಣ ವೃದ್ಧಾಶ್ರಮಕ್ಕೆ ಸುರಕ್ಷಿತವಾಗಿ ಕರೆದೊಯ್ದು ದಾಖಲಿಸಿದರು. ಆಶ್ರಮದಲ್ಲಿ ಅವರಿಗೆ ವಸತಿ, ಆಹಾರ, ವೈದ್ಯಕೀಯ ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಯಿತು.

ಸಮಾಜದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದೂ ತಮ್ಮ ಜವಾಬ್ದಾರಿಯ ಭಾಗ ಎಂಬುದನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ‘ಅಕ್ಕಪಡೆ’ ಸಿಬ್ಬಂದಿಯ ಈ ಮಾನವೀಯ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ಮಾನವೀಯ ಕಾರ್ಯಗಳು ಸಮಾಜಕ್ಕೂ ಸ್ಫೂರ್ತಿಯಾಗಿವೆ. ಆಶ್ರಯವಿಲ್ಲದ ಹಿರಿಯರನ್ನು ಕಂಡರೆ ಅವರನ್ನು ನಿರ್ಲಕ್ಷಿಸದೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂಬ ಸಂದೇಶವನ್ನೂ ಈ ಘಟನೆ ಸಾರುತ್ತದೆ.

ಈ ಕಾರ್ಯಾಚರಣೆಯ ಮೂಲಕ ಸಂಕಷ್ಟದಲ್ಲಿದ್ದ ಒಬ್ಬ ವಯೋವೃದ್ಧೆಗೆ ಸುರಕ್ಷಿತ ಆಶ್ರಯ ಕಲ್ಪಿಸಿರುವ ಚಿಕ್ಕಮಗಳೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ಕಡತ ನಿರ್ವಹಣೆಯಲ್ಲಿ ಶ್ರೇಷ್ಠತೆ: ಪೊಲೀಸ್ ಸಿಬ್ಬಂದಿಗೆ ಡಿಸಿಪಿಯಿಂದ ಗೌರವ

0

ಬೆಂಗಳೂರು, ಆ. 6: ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಡತಗಳ ಸಮರ್ಪಕ ನಿರ್ವಹಣೆ, ದಾಖಲೆಗಳ ಸುಸೂತ್ರ ಸಂರಕ್ಷಣೆ ಹಾಗೂ ಕಚೇರಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಶೇಷವಾಗಿ ಗುರುತಿಸಿ ಪ್ರಶಂಸಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ, ಐಪಿಎಸ್ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿದರು.

ಪೊಲೀಸ್ ಇಲಾಖೆಯ ಕಾರ್ಯವೈಖರಿಯಲ್ಲಿ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಕಚೇರಿಯ ಆಡಳಿತಾತ್ಮಕ ವ್ಯವಸ್ಥೆಯೂ ಅಷ್ಟೇ ಮಹತ್ವದ್ದಾಗಿದೆ. ಇಲಾಖೆಯ ದಾಖಲೆಗಳು, ಕಡತಗಳು ಹಾಗೂ ಆಡಳಿತ ಸಂಬಂಧಿತ ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸುವುದು, ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಹಾಗೂ ಸಮಯಕ್ಕೆ ತಕ್ಕಂತೆ ಕಾರ್ಯಗಳನ್ನು ಪೂರ್ಣಗೊಳಿಸುವುದು ಇಲಾಖೆಯ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ ಅವರು, ಸರ್ಕಾರಿ ಕಚೇರಿಗಳಲ್ಲಿ ಕಡತಗಳ ಸಮರ್ಪಕ ನಿರ್ವಹಣೆ, ದಾಖಲೆಗಳ ಸುಸೂತ್ರ ಸಂರಕ್ಷಣೆ ಹಾಗೂ ಸಮಯೋಚಿತ ಆಡಳಿತಾತ್ಮಕ ಕಾರ್ಯವೈಖರಿ ಯಾವುದೇ ಇಲಾಖೆಯ ಯಶಸ್ಸಿಗೆ ಮೂಲಾಧಾರವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯನಿಷ್ಠೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತ ಸೇವೆಯೇ ಇಲಾಖೆಯ ಗೌರವವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು.

ಇಂತಹ ಉತ್ತಮ ಕಾರ್ಯನಿರ್ವಹಣೆಯನ್ನು ಸಾರ್ವಜನಿಕವಾಗಿ ಗುರುತಿಸಿ ಪ್ರಶಂಸಿಸುವುದು ಕೇವಲ ಗೌರವ ನೀಡುವುದಲ್ಲ, ಇತರ ಸಿಬ್ಬಂದಿಗೂ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗುತ್ತದೆ. ಪ್ರತಿಯೊಬ್ಬ ಸಿಬ್ಬಂದಿಯ ಸೇವೆಯನ್ನು ಇಲಾಖೆ ಗಮನಿಸುತ್ತಿದ್ದು, ಉತ್ತಮ ಸಾಧನೆಗೆ ಯಾವಾಗಲೂ ಸೂಕ್ತ ಗೌರವ ದೊರೆಯಲಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಶಂಸನಾ ಪತ್ರ ಸ್ವೀಕರಿಸಿದ ಸಿಬ್ಬಂದಿ ತಮ್ಮ ಸಂತಸವನ್ನು ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳಿಂದ ದೊರೆತ ಈ ಗೌರವವು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಬದ್ಧತೆ, ಪ್ರಾಮಾಣಿಕತೆ ಹಾಗೂ ಶಿಸ್ತಿನೊಂದಿಗೆ ಇಲಾಖೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಯನ್ನು ಅಭಿನಂದಿಸಿದರು. ಉತ್ತಮ ಆಡಳಿತಾತ್ಮಕ ಸೇವೆಗೆ ನೀಡಲಾದ ಈ ಗೌರವ ಇಲಾಖೆಯಲ್ಲಿ ಸೇವಾ ಮನೋಭಾವ, ಕಾರ್ಯಕ್ಷಮತೆ ಹಾಗೂ ಕರ್ತವ್ಯನಿಷ್ಠೆಯನ್ನು ಮತ್ತಷ್ಟು ಉತ್ತೇಜಿಸುವಂತಾಗಿದೆ.

ಕಳೆದುಹೋದ ಮೊಬೈಲ್‌ ಪತ್ತೆ: ಭಕ್ತನಿಗೆ ಮರಳಿಸಿದ ಪೊಲೀಸರು

0

ಚಾಮುಂಡಿಬೆಟ್ಟಕ್ಕೆ ದೇವಿಯ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರೊಬ್ಬರು ತಮ್ಮ ಅಮೂಲ್ಯ ಮೊಬೈಲ್ ಫೋನ್ ಕಳೆದುಕೊಂಡು ಆತಂಕಕ್ಕೊಳಗಾಗಿದ್ದರು. ಈ ಸಂಬಂಧ ಅವರು ತಕ್ಷಣವೇ ಕೃಷ್ಣರಾಜ ಪೊಲೀಸ್ ಉಪಠಾಣೆಗೆ ದೂರು ಸಲ್ಲಿಸಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ಆರಂಭಿಸಿ ಕಳೆದುಹೋದ ಮೊಬೈಲ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಮತ್ತೊಮ್ಮೆ ತಮ್ಮ ಸೇವಾ ಮನೋಭಾವವನ್ನು ಮೆರೆದಿದ್ದಾರೆ.

ದೂರು ಸ್ವೀಕರಿಸಿದ ಕೂಡಲೇ ಕೃಷ್ಣರಾಜ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮೊಬೈಲ್‌ನ ತಾಂತ್ರಿಕ ಮಾಹಿತಿಯನ್ನು ಆಧರಿಸಿ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು. ತನಿಖೆ ಹಾಗೂ ತಾಂತ್ರಿಕ ನೆರವಿನ ಮೂಲಕ ಮೊಬೈಲ್‌ನ ಸುಳಿವು ಪತ್ತೆಹಚ್ಚಿದ ಪೊಲೀಸರು, ಕೆಲವೇ ಸಮಯದಲ್ಲಿ ಅದನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ನಂತರ ಮೊಬೈಲ್‌ನ ಮಾಲೀಕತ್ವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಸಂಬಂಧಿತ ಭಕ್ತರಿಗೆ ಮೊಬೈಲ್ ಅನ್ನು ಹಸ್ತಾಂತರಿಸಿದರು. ಕಳೆದುಹೋದ ಅಮೂಲ್ಯ ವಸ್ತು ಮರಳಿ ದೊರೆತ ಹಿನ್ನೆಲೆಯಲ್ಲಿ ಭಕ್ತರು ಸಂತಸ ವ್ಯಕ್ತಪಡಿಸಿ, ಕೃಷ್ಣರಾಜ ಪೊಲೀಸರ ತ್ವರಿತ ಸ್ಪಂದನೆ, ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕ ಸ್ನೇಹಿ ಸೇವೆಯನ್ನು ಮನಸಾರೆ ಶ್ಲಾಘಿಸಿದರು.

ಚಾಮುಂಡಿಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೆಲವೊಮ್ಮೆ ಮೊಬೈಲ್, ಪರ್ಸ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳೆದುಹೋಗುವ ಘಟನೆಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೇ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದರೆ ತಾಂತ್ರಿಕ ನೆರವಿನೊಂದಿಗೆ ಶೀಘ್ರ ಪತ್ತೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಸಾರ್ವಜನಿಕರು ದೇವಾಲಯಗಳು, ಪ್ರವಾಸಿ ತಾಣಗಳು ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾವುದೇ ವಸ್ತು ಕಳೆದುಹೋದರೆ ವಿಳಂಬ ಮಾಡದೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಕೃಷ್ಣರಾಜ ಪೊಲೀಸರು ಮನವಿ ಮಾಡಿದ್ದಾರೆ.

ಕಳೆದುಹೋದ ಮೊಬೈಲ್ ಅನ್ನು ಪತ್ತೆಹಚ್ಚಿ ನಿಜವಾದ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿರುವ ಈ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದ್ದು, ಜನಸ್ನೇಹಿ ಪೊಲೀಸ್ ಸೇವೆಗೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.