ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು, ರಾಜ್ಯದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ಇದರ ಜೊತೆಗೆ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು, ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳಿಗೆ ವೇಗ ನೀಡಬೇಕು ಎಂಬ ಒತ್ತಾಯವೂ ಬಂದ್‌ನ ಪ್ರಮುಖ ಬೇಡಿಕೆಗಳಲ್ಲಿದೆ. ಹೀಗಾಗಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವೈಟ್‌ಫೀಲ್ಡ್ ವಿಭಾಗದಾದ್ಯಂತ ಇಂದು ಬೆಳಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ್ ಹಾಗೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ರೌಂಡ್ಸ್ ನಡೆಸಿ, ಪ್ರಮುಖ ರಸ್ತೆಗಳು, ಜನನಿಬಿಡ ಪ್ರದೇಶಗಳು, ಸೂಕ್ಷ್ಮ ಸ್ಥಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ, ಕಾನೂನುಬಾಹಿರ ಚಟುವಟಿಕೆ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿಯ ಮೇಲೆ ಪೊಲೀಸರು ನಿರಂತರವಾಗಿ ನಿಗಾ ಇರಿಸಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇನ್ನು ಬಂದ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿ, ಸುಳ್ಳು ಸುದ್ದಿ ಅಥವಾ ಪರಿಶೀಲಿಸದ ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡದಂತೆ ಪೊಲೀಸರು ಮನವಿ ಮಾಡಿದ್ದಾರೆ.ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಒಟ್ಟಾರೆ, ಬಂದ್ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.


