ಕೋಣನಕುಂಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹18 ಲಕ್ಷದ ಚಿನ್ನ, ಬೆಳ್ಳಿ ಜಪ್ತಿ

0

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಹಾಗೂ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದ ಎರಡು ಮನೆ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.ಮನೆಯ ಕಿಟಕಿ ಹಾಗೂ ಹಿಂಬಾಗಿಲಿನ ಮೂಲಕ ನುಗ್ಗಿದ್ದ ಕಳ್ಳರು, ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿ ಆಧರಿಸಿ ಆಗಸ್ಟ್ 26ರಂದು ಹರಿನಗರದ ನಿವಾಸದಿಂದ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿ ತನ್ನ ಅಪ್ರಾಪ್ತ ಮಗನೊಂದಿಗೆ ಸೇರಿಕೊಂಡು ಎರಡೂ ಮನೆಗಳಲ್ಲಿ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಆರೋಪಿಯನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಕೆಲವನ್ನು ಹರಿನಗರ ಹಾಗೂ ಹೆಬ್ಬಗೋಡಿಯ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಿವಿಧ ಸ್ಥಳಗಳಲ್ಲಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ.

ಆರೋಪಿಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 161 ಗ್ರಾಂ ಚಿನ್ನಾಭರಣ ಹಾಗೂ 150 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಜಪ್ತಿಯಾಗಿರುವ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ಒಟ್ಟು ಮೌಲ್ಯ ₹18 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಗನು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿರುವುದರಿಂದ, ಕಾನೂನು ಪ್ರಕಾರ ಆತನನ್ನು ತಾಯಿಯೊಂದಿಗೆ ಕಳುಹಿಸಲಾಗಿದೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ ವಿಭಾಗದ ಎಸಿಪಿ ಗೋಪಾಲ್ ಡಿ. ಜೋಗೀನ್ ಅವರ ನೇತೃತ್ವದಲ್ಲಿ, ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್ ಟಿ. ಕೃಷ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲಘಟ್ಟಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹17 ಲಕ್ಷದ ಚಿನ್ನ ಜಪ್ತಿ

0

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯ ಮನೆಯೊಂದರಲ್ಲಿ 145 ಗ್ರಾಂ ಚಿನ್ನಾಭರಣ ಕಳವು ಪ್ರಕರಣ ಪತ್ತೆಯಾಗಿದೆ.ಆಗಸ್ಟ್ 6ರಿಂದ 8ರ ನಡುವೆ ಮನೆಯಲ್ಲಿದ್ದ ಚಿನ್ನಾಭರಣ ಕಳುವಾಗಿದ್ದು, ಮನೆಯಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆಗಸ್ಟ್ 27ರಂದು ಯಲಹಂಕ ನಾಲ್ಕನೇ ಹಂತದ ಬಳಿ ಕೇರ್‌ಟೇಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಚಿನ್ನಾಭರಣ ಕಳವು ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ನ್ಯಾಯಾಲಯದಿಂದ ಪೊಲೀಸ್ ಅಭಿರಕ್ಷೆಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಕೆಲವನ್ನು ಕಲಬುರಗಿಯ ಎರಡು ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಹಾಗೂ ಉಳಿದ ಚಿನ್ನಾಭರಣಗಳನ್ನು ಕಲಬುರಗಿಯಲ್ಲಿರುವ ಸ್ನೇಹಿತನಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದಾನೆ.

ಆರೋಪಿಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎರಡು ಜ್ಯೂವೆಲರಿ ಅಂಗಡಿಗಳಿಂದ 90 ಗ್ರಾಂ ಹಾಗೂ ಆರೋಪಿಯ ಸ್ನೇಹಿತನಿಂದ 20 ಗ್ರಾಂ ಚಿನ್ನದ ಗಟ್ಟಿ ಸೇರಿದಂತೆ ಒಟ್ಟು 110 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಚಿನ್ನದ ಮೌಲ್ಯ 17 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಆರೋಪಿಯನ್ನು ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ ವಿಭಾಗದ ಎಸಿಪಿ ಗೋಪಾಲ ಡಿ. ಜೋಗೀನ್ ಅವರ ನೇತೃತ್ವದಲ್ಲಿ, ತಲಘಟ್ಟಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಎಸ್. ಚೌಧರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಡ್ರಗ್ಸ್ ಬೇಟೆ..₹12.11 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

0

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಆಧರಿಸಿ ವಿವಿಧ ದಿನಗಳಲ್ಲಿ ದಾಳಿ ನಡೆಸಿದ ಪೊಲೀಸರು, ಓರ್ವ ವಿದೇಶಿ, ಓರ್ವ ಹೊರರಾಜ್ಯ ಹಾಗೂ ಐವರು ಸ್ಥಳೀಯರು ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳಿಂದ ಬರೋಬ್ಬರಿ 11 ಕೆಜಿ 237 ಗ್ರಾಂ ಎಂಡಿಎಂಎ, 2 ಕೆಜಿ 352 ಗ್ರಾಂ ಹೈಡ್ರೋ ಗಾಂಜಾ ಹಾಗೂ 10 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಜೊತೆಗೆ ಒಂದು ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆಯಲಾಗಿದೆ. ಜಪ್ತಿಯಾಗಿರುವ ಮಾದಕ ವಸ್ತುಗಳ ಒಟ್ಟು ಮೌಲ್ಯ ₹12.11 ಕೋಟಿ, ಮಾರುಕಟ್ಟೆ ಮೌಲ್ಯ ಸುಮಾರು ₹24.22 ಕೋಟಿ ಎಂದು ಅಂದಾಜಿಸಲಾಗಿದೆ.

ವಿದೇಶ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಬಂಧಿತ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಡಿಸಿಪಿಗಳಾದ ಕೆ. ವಂಶಿಕೃಷ್ಣ, ವಿಕ್ರಮ್ ಅಮಟೆ ಹಾಗೂ ಜಿ.ಕೆ. ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಸಂಬಂಧಪಟ್ಟ ಎಸಿಪಿಗಳ ನೇತೃತ್ವದಲ್ಲಿ ನಾಲ್ಕು ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ತಂಡಗಳು ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿವೆ.

ಬೆಂಗಳೂರು ಡಿಆರ್‌ಐ ದಾಳಿ: 180 ನಕ್ಷತ್ರ ಆಮೆಗಳು ವಶ

0

ಬೆಂಗಳೂರಿನ ಗಾಂಧಿನಗರದಲ್ಲಿ ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ, 180 ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸುಮಾರು ಹತ್ತು ಸಾವಿರ ರೂಪಾಯಿಗೆ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ಆಮೆಗಳನ್ನು ಜಪ್ತಿ ಮಾಡಿದ್ದಾರೆ.ಕಲಾಸಿಪಾಳ್ಯದಿಂದ ನಕ್ಷತ್ರ ಆಮೆಗಳನ್ನು ತಂದುಕೊಟ್ಟಿದ್ದ ವ್ಯಕ್ತಿಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ನಕ್ಷತ್ರ ಆಮೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಡಿಆರ್‌ಐ ಅಧಿಕಾರಿಗಳು, ಅಕ್ರಮ ಸಾಗಾಟ ಹಾಗೂ ಮಾರಾಟದ ಜಾಲದ ಕುರಿತು ತನಿಖೆ ಮುಂದುವರಿಸಿದ್ದಾರೆ

ಫರಹತಾಬಾದ್ ಪೊಲೀಸ್ ಠಾಣೆಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ

0

ಕಲಬುರಗಿ: ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರು ಫರಹತಾಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಠಾಣೆಯಲ್ಲಿ ಬಾಕಿ ಇರುವ ಪ್ರಕರಣಗಳ ಕಡತಗಳನ್ನು ಪರಿಶೀಲಿಸಿದ ಆಯುಕ್ತರು, ಪ್ರಕರಣಗಳ ತನಿಖೆ ಹಾಗೂ ವಿಲೇವಾರಿ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.

ಬಳಿಕ ಪೊಲೀಸ್ ಠಾಣೆಯ ಆವರಣ ಹಾಗೂ ಸಿಬ್ಬಂದಿಯ ಕರ್ತವ್ಯ ದಿನಚರಿಯನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿಯವರು ಜವಾಬ್ದಾರಿಯುತವಾಗಿ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು, ಸಿಬ್ಬಂದಿಯ ಪಾಲಕರೊಂದಿಗೆ ಸಂವಾದ ನಡೆಸಿ, ವಸತಿ ಗೃಹಗಳಲ್ಲಿನ ಕುಂದುಕೊರತೆಗಳ ಕುರಿತು ಮಾಹಿತಿ ಆಲಿಸಿದರು. ಸಿಬ್ಬಂದಿಯ ಕುಟುಂಬದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪೊಲೀಸ್ ಸಿಬ್ಬಂದಿಯ ಕಲ್ಯಾಣ ಹಾಗೂ ಉತ್ತಮ ಕಾರ್ಯನಿರ್ವಹಣೆಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಇನ್‌ಸ್ಟಾಗ್ರಾಂನಲ್ಲಿ ಕತ್ತಿ ಪ್ರದರ್ಶನ – ಹುಬ್ಬಳ್ಳಿ ಯುವಕ ಅರೆಸ್ಟ್

0

ಇನ್‌ಸ್ಟಾಗ್ರಾಂನಲ್ಲಿ ಕತ್ತಿ ಹಿಡಿದು ಪೋಸ್‌ ಮಾಡಿದ ಹುಬ್ಬಳ್ಳಿ ಯುವಕನಿಗೆ ಈಗ ಪೊಲೀಸ್‌ ಶಾಕ್‌ ಎದುರಾಗಿದೆ..

ಕತ್ತಿ ಹಿಡಿದುಕೊಂಡು ಫೋಟೋ ತೆಗೆಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಯುವಕನನ್ನು ಹುಬ್ಬಳ್ಳಿಯ ಗೌರಿಗುಡಿ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೈಯಲ್ಲಿ ಕತ್ತಿ ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುವ ರೀತಿಯಲ್ಲಿ ವರ್ತಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶಿಸಿ ಪುಂಡಾಟಿಕೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಅನಿತಾ ಹದ್ದಣ್ಣವರ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

0

ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಮಾಡಲಾಗಿದೆ.

ದಕ್ಷಿಣ ಪಶ್ಚಿಮ ವಿಭಾಗದ ಬೆಂಗಳೂರು ಡಿಸಿಪಿಯಾಗಿದ್ದ ಅನಿತಾ ಭೀಮಪ್ಪ ಹದ್ದಣ್ಣವರ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ನಿಯೋಜನೆಗಾಗಿ ಕಾಯುತ್ತಿದ್ದ ಡಾ. ರಾಮ್ ಎಲ್. ಅರಸಿದ್ದಿ ಅವರನ್ನು ಬೆಂಗಳೂರು ನಗರದ ಗುಪ್ತಚರ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.

ನಿಯೋಜನೆಗಾಗಿ ಕಾಯುತ್ತಿದ್ದ ಲಕ್ಷ್ಮೀ ಗಣೇಶ್ ಕೆ. ಅವರನ್ನು ಬೆಂಗಳೂರು ದಕ್ಷಿಣ ಪಶ್ಚಿಮ ವಿಭಾಗದ ಡಿಸಿಪಿಯಾಗಿ ನಿಯೋಜಿಸಲಾಗಿದೆ.

ಇನ್ನು ಸಿಐಡಿ ವಿಭಾಗದ ಪೊಲೀಸ್ ಅಧೀಕ್ಷಕರಾಗಿದ್ದ ಸ್ಯಾಮ್ ವರ್ಘೀಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಸೆಪ್ಟೆಂಬರ್ 7ರಂದು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ

33 ಸಾವಿರಕ್ಕೂ ಹೆಚ್ಚು ವಾಹನ ತಪಾಸಣೆ: 551 ಡ್ರಂಕ್‌ & ಡ್ರೈವ್ ಪ್ರಕರಣ ದಾಖಲು

0

ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಅತಿವೇಗದ ಚಾಲನೆ ವಿರುದ್ಧ ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.ಆಗಸ್ಟ್ 31ರಿಂದ ಸೆಪ್ಟೆಂಬರ್ 6ರವರೆಗೆ ನಗರದ 53 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರು ಹಾಗೂ ಸವಾರರ ವಿರುದ್ಧ 33,059 ವಾಹನಗಳನ್ನು ತಪಾಸಣೆ ನಡೆಸಿ, ಒಟ್ಟು 551 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ವೇಳೆ ಅತಿವೇಗವಾಗಿ ವಾಹನ ಚಲಾಯಿಸುವವರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದ್ದು, 141 ಪ್ರಕರಣಗಳನ್ನು ದಾಖಲಿಸಿ, 1 ಲಕ್ಷ 42 ಸಾವಿರ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ.

ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಅತಿವೇಗದ ಚಾಲನೆಯಿಂದ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವ ಜೊತೆಗೆ, ರಸ್ತೆ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ.

ಕೊಡಗು ಜಿಲ್ಲೆಯಲ್ಲಿ APC ನೇಮಕಾತಿ ಲಿಖಿತ ಪರೀಕ್ಷೆ

0

ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಇಂದು ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆ ನಡೆಯಿತು.ಪರೀಕ್ಷೆ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಹಾಗೂ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.

ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಗಮವಾಗಿ ನಡೆಯುವಂತೆ ಪೊಲೀಸ್ ಸಿಬ್ಬಂದಿಯಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.ಪರೀಕ್ಷಾ ಕೇಂದ್ರಗಳಲ್ಲಿನ ಭದ್ರತಾ ವ್ಯವಸ್ಥೆ, ಅಭ್ಯರ್ಥಿಗಳ ಪ್ರವೇಶ ಹಾಗೂ ಬಂದೋಬಸ್ತ್ ಕರ್ತವ್ಯದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಕರ್ನಾಟಕಕ್ಕೆ ನಾಲ್ವರು ನೂತನ IPS ಅಧಿಕಾರಿಗಳ ನಿಯೋಜನೆ

0

ರ್ನಾಟಕ ಕೇಡರ್‌ನ ತರಬೇತಿ ಪೂರ್ಣಗೊಳಿಸಿದ ನಾಲ್ವರು ನೂತನ IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಷೇತ್ರ ಮಟ್ಟದ ಜವಾಬ್ದಾರಿ ವಹಿಸಿದೆ.ರಾಜ್ಯದ ವಿವಿಧ ಪೊಲೀಸ್ ಉಪವಿಭಾಗಗಳಿಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾಗಿ, ಅಂದರೆ ASP ಹುದ್ದೆಗೆ ನಾಲ್ವರು ಅಧಿಕಾರಿಗಳನ್ನು ನಿಯೋಜಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜಿತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಉಪವಿಭಾಗದ ASP ಆಗಿ ಡಾ. ಭಾನು ಪ್ರಕಾಶ್ ಜೆ. ಅವರನ್ನು ನಿಯೋಜಿಸಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ASP ಆಗಿ ಇಶಿತಾ ಗುಪ್ತಾ ಅವರನ್ನು ನೇಮಿಸಲಾಗಿದೆ.ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮಾಂತರ ಉಪವಿಭಾಗದ ASP ಆಗಿ ಅನನ್ಯ ಶ್ರೀವಾಸ್ತವ್ ಅವರನ್ನು ನಿಯೋಜಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಗದ ASP ಆಗಿ ರಾನು ಗುಪ್ತಾ ಅವರನ್ನು ನೇಮಿಸಲಾಗಿದೆ.ತರಬೇತಿ ಪೂರ್ಣಗೊಳಿಸಿ ಪೊಲೀಸ್ ಸೇವೆಗೆ ಪ್ರವೇಶಿಸಿರುವ ಈ ನಾಲ್ವರು ಅಧಿಕಾರಿಗಳಿಗೆ ಇದೀಗ ಕ್ಷೇತ್ರ ಮಟ್ಟದಲ್ಲಿ ನೇರ ಪೊಲೀಸ್ ಆಡಳಿತದ ಜವಾಬ್ದಾರಿ ದೊರೆತಿದೆ.

ತಮ್ಮ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಆಡಳಿತ ಸೇರಿದಂತೆ ಹಲವು ಪ್ರಮುಖ ಹೊಣೆಗಾರಿಕೆಗಳನ್ನು ಈ ಅಧಿಕಾರಿಗಳು ನಿರ್ವಹಿಸಲಿದ್ದಾರೆ.ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಇತ್ತೀಚೆಗೆ ಹಿರಿಯ IPS ಅಧಿಕಾರಿಗಳ ವರ್ಗಾವಣೆಯನ್ನೂ ನಡೆಸಿತ್ತು.

ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 15 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.ಹಿರಿಯ ಅಧಿಕಾರಿಗಳ ವರ್ಗಾವಣೆ ಹಾಗೂ ನೂತನ IPS ಅಧಿಕಾರಿಗಳ ಕ್ಷೇತ್ರ ನಿಯೋಜನೆಯ ಮೂಲಕ ರಾಜ್ಯದ ವಿವಿಧ ಹಂತಗಳ ಪೊಲೀಸ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.