ಸಕಲೇಶಪುರ, ಆ.6: ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ ಸುಮಾರು ₹2.5 ಲಕ್ಷ ಮೌಲ್ಯದ 25 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಯನ್ನು ಕೊಡಗು ಮೂಲದ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 5ರಂದು ಮಧ್ಯಾಹ್ನ ಸುಮಾರು 2.15ರ ವೇಳೆಗೆ ಸಕಲೇಶಪುರ ಪಟ್ಟಣದ ಗುರುದೇವ ಪೆಟ್ರೋಲ್ ಬಂಕ್ ಸಮೀಪದ ನಾಗ್ ಎನ್‌ಕ್ಲೇವ್ ಲೇಔಟ್ ಪ್ರದೇಶದಲ್ಲಿ ಕಾರಿನಲ್ಲೇ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರಿಗೆ ಲಭ್ಯವಾಗಿತ್ತು.
ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿತು. ಪರಿಶೀಲನೆ ವೇಳೆ ಆತನ ಬಳಿ ಇದ್ದ 25 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು, ಅದನ್ನು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯು ಸಕಲೇಶಪುರ ನಗರ ಪೊಲೀಸ್ ಇನ್ಸ್‌ಪೆಕ್ಟರ್ ವನರಾಜು ಅವರ ಮಾರ್ಗದರ್ಶನದಲ್ಲಿ, ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಖಾದರ್ ಅಲಿ, ರೇವಣ್ಣ ಎಸ್.ಜೆ., ಶ್ರೀಧರ್, ರಾಕೇಶ್, ಸೋಮಶೇಖರ್, ಅಶೋಕ್, ಸುನಿಲ್ ಕುಮಾರ್, ಹನುಮಂತು, ಶಿವಕುಮಾರ್ ಹಾಗೂ ಚಾಲಕ ಮಧು ಭಾಗವಹಿಸಿದ್ದರು.