ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಗೆ ನಕಲಿ ಪಿಸ್ತೂಲು ತೋರಿಸಿ ಹಾಗೂ ಹಲ್ಲೆ ಮಾಡಿ, ಬೆದರಿಸಿ ಮನೆಯಲ್ಲಿದ್ದ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಚಾಮರಾಜಪೇಟೆ ನಿವಾಸಿ ಅಪ್ಸರ್ ಮತ್ತು ಪಾದರಾಯನಪುರದ ನಿವಾಸಿ ಅಬ್ಬಲ್ ಬಂಧಿತ ಆರೋಪಿಗಳಾಗಿದ್ದು, ಪಾದರಾಯನಪುರದ 7ನೇ ಕ್ರಾಸ್ನಲ್ಲಿರುವ ಕಟ್ಟಡವೊಂದರ 4ನೇ ಹಂತದ ಮಹಡಿಯಲ್ಲಿ ತಾಯಿ-ಮಗಳು ಇಬ್ಬರೇ ವಾಸವಾಗಿದ್ದು, ಕೆಲಸದ ನಿಮಿತ್ತ ತಾಯಿ ಹೊರಹೋಗಿದ್ದು, ಮನೆಯಲ್ಲಿ ಅವರ ಮಗಳು ಒಬ್ಬರೇ ಇರುವುದನ್ನು ಖಚಿತ ಪಡಿಸಿಕೊಂಡು, ಹಾಡುಹಗಲೇ ಇವರ ಮನೆಗೆ ನುಗ್ಗಿ, ನಕಲಿ ಪಿಸ್ತೂಲು ತೋರಿಸಿ ಅದರಿಂದ ಬಾಲಕಿಯ ತಲೆಗೆ ಹೊಡೆದು ಗಾಯಗೊಳಿಸಿ ಚಾಕುವಿನಿಂದ ಬೆದರಿಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಬಾಲಕಿಯ ತಾಯಿ ಜೆ ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುತ್ತಾರೆ, ದರೋಡೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜ್ ಅವರು, ಸಿಬ್ಬಂಧಿಗಳನ್ನು ತನಿಖೆಗೆ ಇಳಿಸಿ ದರೋಡೆಕೋರರಿಗಾಗಿ ಬಲೆ ಬೀಸುತ್ತಾರೆ. ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಳೇಗುಡ್ಡದಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ದರೋಡೆಕೋರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ 25ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ 139 ಗ್ರಾಂ ಚಿನ್ನಾಭರಣ, 8 ಲಕ್ಷರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ಜೆ ಜೆ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಐಪಿಎಸ್ ಅವರ ನಿರ್ದೇಶನದಂತೆ, ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಉದಯ್ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ, ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜು ಅವರ ನೇತೃತ್ವದಲ್ಲಿ, ಪಿಎಸ್ಐಗಳಾದ ಚೋಳಪ್ಪ, ಪದ್ಮನಾಭ, ಎಎಸ್ಐ ಕುಮಾರ್, ಸಿಬ್ಬಂದಿಗಳಾದ ದಾದಾಪೀರ್, ಮನೋಜ್ ಕುಮಾರ್, ಕರೀಂಸಾಬ್ ನದಾಫ್, ಹಣಮಂತ. ಚಂದ್ರಪ್ಪ, ಸಂಜೀವ್, ಈರಪ್ಪ, ಪ್ರದೀಪ್ ಅವರುಗಳ ತಂಡ ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಗೆ ನಕಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ ಮಾಡಿದ್ದವರನ್ನು ಬಂಧಿಸಿದ ಜೆ ಜೆ ನಗರ ಪೊಲೀಸರು…!